ನವದೆಹಲಿ:ರಾಷ್ಟ್ರ ರಾಜಧಾನಿ ದೆಹಲಿಯಿಂದ ಇಂದು ಬೆಂಗಳೂರಿಗೆ ಬರುತ್ತಿದ್ದ ಆಕಾಸಾ ಏರ್ ವಿಮಾನಕ್ಕೆ ಬಾಂಬ್ ಬೆದರಿಕೆ ಕರೆ ಬಂದಿದ್ದು, ವಿಮಾನ ಮತ್ತೆ ದೆಹಲಿಗೆ ಮರಳಿದೆ.
ದೆಹಲಿಯಿಂದ 180 ಪ್ರಯಾಣಿಕರೊಂದಿಗೆ ಟೇಕ್ ಆಫ್ ಆಗಿದ್ದ ಕ್ಯೂಪಿ 1335 ವಿಮಾನ ದೆಹಲಿಯಿಂದ ಬೆಂಗಳೂರಿಗೆ ಬರುತ್ತಿತ್ತು. ಈ ಸಂದರ್ಭದಲ್ಲಿ ಬಾಂಬ್ ಬೆದರಿಕೆ ಎಚ್ಚರಿಕೆ ಬಂದ ಹಿನ್ನೆಲೆಯಲ್ಲಿ ವಿಮಾನ ಮಾರ್ಗಮಧ್ಯೆಯೇ ದೆಹಲಿಗೆ ಹಿಂದಿರುಗಿದ್ದು, ಸುರಕ್ಷಿತವಾಗಿ ಲ್ಯಾಂಡ್ ಆಗಿದೆ.
ಇಂಡಿಗೋ ವಿಮಾನಕ್ಕೂ ಬೆದರಿಕೆ:ದೆಹಲಿಯಿಂದ ಮುಂಬೈಗೆ ಬರುತ್ತಿದ್ದ ಇಂಡಿಗೋ ವಿಮಾನಕ್ಕೂ ಬಾಂಬ್ ಬೆದರಿಕೆ ಕರೆ ಬಂದಿದೆ. ಹೀಗಾಗಿ ಸಂಚಾರ ಮಾರ್ಗ ಬದಲಾಯಿಸಿ ಅಹಮದಾಬಾದ್ನಲ್ಲಿ ಲ್ಯಾಂಡ್ ಮಾಡಲಾಯಿತು.
ಈ ಕುರಿತು ಪ್ರತಿಕ್ರಿಯಿಸಿರುವ ಅಧಿಕಾರಿಗಳು, "ಇವು ಹುಸಿ ಬಾಂಬ್ ಬೆದರಿಕೆ ಕರೆಗಳು. ಪ್ರಯಾಣಿಕರ ಸುರಕ್ಷತೆಗೆ ಕ್ರಮ ಕೈಗೊಳ್ಳಲಾಗಿದೆ. ವಿಮಾನ ಲ್ಯಾಂಡ್ ಆದ ಬಳಿಕ ಸಂಪೂರ್ಣ ತಪಾಸಣೆ ನಡೆಸಲಾಗಿದೆ. ಯಾವುದೇ ಅನುಮಾನಾಸ್ಪದ ವಸ್ತುಗಳು ಪತ್ತೆಯಾಗಿಲ್ಲ" ಎಂದು ತಿಳಿಸಿದರು.
"ಮಂಗಳವಾರ ರಾತ್ರಿ 200 ಪ್ರಯಾಣಿಕರನ್ನು ಹೊತ್ತ 6ಇ 651 ವಿಮಾನ ಮುಂಬೈಗೆ ಪ್ರಯಾಣಿಸಬೇಕಿತ್ತು. ಈ ವೇಳೆ ಅಪರಿಚಿತನೊಬ್ಬ ವಿಮಾನದಲ್ಲಿ ಬಾಂಬ್ ಇಡಲಾಗಿದೆ ಎಂದು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದ. ಇದರಿಂದಾಗಿ ಆತಂಕ ಮೂಡಿತ್ತು. ತಕ್ಷಣವೇ ಮುಂಬೈನ ಎಟಿಸಿಗೆ ಎಚ್ಚರಿಕೆ ನೀಡಲಾಯಿತು. ಪೈಲಟ್ ಸಮೀಪದ ಅಹಮದಾಬಾದ್ ವಿಮಾನ ನಿಲ್ದಾಣದಲ್ಲಿ ತುರ್ತು ಲ್ಯಾಂಡಿಂಗ್ ಮಾಡಿದರು. ಇದಾದ ಬಳಿಕ ವಿಮಾನ ದೆಹಲಿಗೆ ಪ್ರಯಾಣಿಸಿತು" ಎಂದು ಅಧಿಕಾರಿಗಳು ಹೇಳಿದ್ದಾರೆ.
"ಮಧ್ಯರಾತ್ರಿ ಅಹಮದಾಬಾದ್ ವಿಮಾನ ನಿಲ್ದಾಣದಲ್ಲಿ ವಿಮಾನ ಇಳಿದ ಬಳಿಕ ಪ್ರಯಾಣಿಕರ ಸಂಪೂರ್ಣ ತಪಾಸಣೆ ನಡೆಸಲಾಯಿತು. ಬುಧವಾರ ಬೆಳಗ್ಗೆ ಭದ್ರತಾ ಸಿಬ್ಬಂದಿಗಳ ಅನುಮತಿ ಮೇರೆಗೆ ವಿಮಾನ ದೆಹಲಿಗೆ ಪ್ರಯಾಣ ಬೆಳೆಸಿತು" ಎಂದು ಹೇಳಿದ್ದಾರೆ.
ಹುಸಿ ಬೆದರಿಕೆ ಕರೆ, ಹಲವು ವಿಮಾನಗಳ ಹಾರಾಟದಲ್ಲಿ ವ್ಯತ್ಯಯ:ಸೋಮವಾರ ಕೂಡ ಮುಂಬೈನಿಂದ ಹೊರಟಿದ್ದ ಮೂರು ಅಂತಾರಾಷ್ಟ್ರೀಯ ವಿಮಾನಗಳಿಗೆ ಬಾಂಬ್ ಬೆದರಿಕೆ ಬಂದಿತ್ತು. ನ್ಯೂಯಾರ್ಕ್‌ಗೆ ತೆರಳುತ್ತಿದ್ದ ಏರ್ ಇಂಡಿಯಾ ವಿಮಾನವನ್ನು ನವದೆಹಲಿಗೆ ಮಾರ್ಗ ಬದಲಾಯಿಸಿ, ಪ್ರಯಾಣಿಕರಿಗೆ ಪರ್ಯಾಯ ವ್ಯವಸ್ಥೆ ಮಾಡಲಾಗಿತ್ತು. ವಿಮಾನ ತಪಾಸಣೆ ನಡೆಸಿದಾಗ ಯಾವುದೇ ಅನುಮಾನಾಸ್ಪದ ವಸ್ತುಗಳು ಕಂಡುಬಂದಿಲ್ಲ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದರು.
ಮಂಗಳವಾರ ದೆಹಲಿಯಿಂದ ಚಿಕಾಗೋಗೆ 211 ಜನರನ್ನು ಹೊತ್ತು ಸಾಗುತ್ತಿದ್ದ ಏರ್ ಇಂಡಿಯಾ ವಿಮಾನಕ್ಕೂ ಬೆದರಿಕೆ ಕರೆ ಬಂದಿದ್ದು, ವಿಮಾನವನ್ನು ಕೆನಡಾದಲ್ಲಿ ಲ್ಯಾಂಡ್ ಮಾಡಲಾಯಿತು. ಮಂಗಳವಾರ ಆರು ಭಾರತೀಯ ವಿಮಾನಗಳಿಗೆ ಸಾಮಾಜಿಕ ಮಾಧ್ಯಮದ ಮೂಲಕ ಬಾಂಬ್ ಬೆದರಿಕೆ ಸಂದೇಶಗಳು ಬಂದಿವೆ.
ಇದನ್ನೂ ಓದಿ: ಮುಂಬೈನ 14 ಅಂತಸ್ತಿನ ಕಟ್ಟಡದಲ್ಲಿ ಬೆಂಕಿ: ಮೂವರು ಸಾವು