ಕರ್ನಾಟಕ

karnataka

ETV Bharat / bharat

ಮಾಜಿ ಸಿಎಂ ಸುಖಬೀರ್ ಬಾದಲ್​ಗೆ ಧಾರ್ಮಿಕ ಶಿಕ್ಷೆ: ಸ್ವರ್ಣ ಮಂದಿರದಲ್ಲಿ ಪಾತ್ರೆ, ಬೂಟು ತೊಳೆಯುವಂತೆ ಅಕಾಲ ತಖ್ತ್ ಆದೇಶ

ಮಾಜಿ ಮುಖ್ಯಮಂತ್ರಿ ಸುಖಬೀರ್ ಬಾದಲ್​ ಅವರಿಗೆ ಧಾರ್ಮಿಕ ಶಿಕ್ಷೆ ವಿಧಿಸಲಾಗಿದೆ.

ಸುಖಬೀರ್ ಸಿಂಗ್ ಬಾದಲ್​
ಸುಖಬೀರ್ ಸಿಂಗ್ ಬಾದಲ್​ (IANS)

By ETV Bharat Karnataka Team

Published : 6 hours ago

ಅಮೃತಸರ: ಧಾರ್ಮಿಕ ದುರ್ವರ್ತನೆ ನಡತೆ ತೋರಿದ್ದಕ್ಕಾಗಿ ಮಾಜಿ ಮುಖ್ಯಮಂತ್ರಿ ಸುಖಬೀರ್ ಸಿಂಗ್ ಬಾದಲ್​ಗೆ ಧಾರ್ಮಿಕ ಶಿಕ್ಷೆ ನೀಡಲಾಗಿದೆ. 'ತಂಖಾಹ್' ಎಂದು ಕರೆಯಲ್ಪಡುವ ಅಕಾಲ್ ತಖ್ತ್ ಜತೇದಾರ್ ಗ್ಯಾನಿ ರಘಬೀರ್ ಸಿಂಗ್ ನೇತೃತ್ವದ ಐವರು ಪ್ರಧಾನ ಅರ್ಚಕರು ಸೋಮವಾರ ಶಿಕ್ಷೆ ಘೋಷಿಸಿದ್ದಾರೆ. ಬಾದಲ್ ಅವರು ಅಮೃತಸರದ ಸ್ವರ್ಣ ಮಂದಿರದಲ್ಲಿ ಪಾತ್ರೆಗಳು ಮತ್ತು ಬೂಟುಗಳನ್ನು ಸ್ವಚ್ಛಗೊಳಿಸಬೇಕಿದೆ.

ಸಿಖ್ಖರ ಸರ್ವೋಚ್ಚ ಧಾರ್ಮಿಕ ಸಂಸ್ಥೆಯಾದ ಅಕಾಲ್ ತಖ್ತ್, ಮಾಜಿ ಮುಖ್ಯಮಂತ್ರಿ ದಿವಂಗತ ಪ್ರಕಾಶ್ ಸಿಂಗ್ ಬಾದಲ್ ಅವರಿಗೆ ನೀಡಲಾಗಿದ್ದ 'ಪಂಥ್ ರತನ್ ಫಖ್ರ್-ಎ-ಕ್ವಾಮ್' ಎಂಬ ಬಿರುದನ್ನು ಕೂಡ ಹಿಂತೆಗೆದುಕೊಂಡಿದೆ. ಧರ್ಮನಿಂದನೆ ಪ್ರಕರಣದ ಆರೋಪಿಯಾಗಿರುವ ಸ್ವಯಂ ಘೋಷಿತ ದೇವಮಾನವ ಮತ್ತು ಡೇರಾ ಸಚ್ಚಾ ಸೌದಾ ಮುಖ್ಯಸ್ಥ ಗುರ್ಮೀತ್ ರಾಮ್ ರಹೀಮ್ ಸಿಂಗ್ ಅವರಿಗೆ ಕ್ಷಮಾದಾನ ನೀಡಿದ ಆರೋಪವನ್ನೂ ಅವರ ಮೇಲೆ ಹೊರಿಸಲಾಗಿದೆ.

ಶಿರೋಮಣಿ ಅಕಾಲಿ ದಳ (ಎಸ್ಎಡಿ) ಅಧ್ಯಕ್ಷ ಸ್ಥಾನಕ್ಕೆ ಸುಖಬೀರ್ ಬಾದಲ್ ಅವರ ರಾಜೀನಾಮೆಯನ್ನು ಮೂರು ದಿನಗಳಲ್ಲಿ ಅಂಗೀಕರಿಸುವಂತೆ ಜತೇದಾರ್ ಗ್ಯಾನಿ ರಘಬೀರ್ ಸಿಂಗ್ ಅಕಾಲಿ ದಳದ ಕಾರ್ಯಕಾರಿ ಸಮಿತಿಗೆ ಸೂಚಿಸಿದರು ಮತ್ತು ಆರು ತಿಂಗಳೊಳಗೆ ಸದಸ್ಯತ್ವ ಅಭಿಯಾನವನ್ನು ಪ್ರಾರಂಭಿಸುವಂತೆ ಮತ್ತು ಹೊಸ ಅಧ್ಯಕ್ಷರನ್ನು ಆಯ್ಕೆ ಮಾಡುವಂತೆ ಪಕ್ಷದ ಕಾರ್ಯಕಾರಿ ಸಮಿತಿಗೆ ನಿರ್ದೇಶನ ನೀಡಿದರು.

2007 ಮತ್ತು 2017ರ ನಡುವೆ ತಮ್ಮ ಪಕ್ಷವು ಅಧಿಕಾರದಲ್ಲಿದ್ದಾಗ ರಾಜಕೀಯ ನಿರ್ಧಾರಗಳನ್ನು ತೆಗೆದುಕೊಂಡ ಮತ್ತು ಸಿಖ್ ಪಂಥ್​ ಗೆ ಹಾನಿ ಮಾಡಿದ ಆರೋಪದ ಮೇಲೆ ಸುಖಬೀರ್ ಬಾದಲ್ ಮತ್ತು ಇತರ ಸಚಿವರನ್ನು ಆಗಸ್ಟ್ 30ರಂದು ಇಲ್ಲಿನ ಗೋಲ್ಡನ್ ಟೆಂಪಲ್ ಸಂಕೀರ್ಣದಲ್ಲಿರುವ ಅಕಾಲ್ ತಖ್ತ್ ಮುಂದೆ ಹಾಜರಾಗುವಂತೆ ಸೂಚಿಸಲಾಗಿತ್ತು. ಅಂದಿನ ವಿಚಾರಣೆಯಲ್ಲಿ ಅವರನ್ನು 'ತಂಖೈಯಾ' ಎಂದು ಘೋಷಿಸಲಾಗಿತ್ತಾದರೂ ಶಿಕ್ಷೆ ನೀಡಿರಲಿಲ್ಲ.

ಅಕಾಲಿ ದಳದ ನಾಯಕರಾದ ಸುಖಬೀರ್ ಬಾದಲ್, ಸುಖದೇವ್ ಧಿಂಡ್ಸಾ, ಗುಲ್ಜಾರ್ ಸಿಂಗ್ ರಾಣಿಕೆ ಮತ್ತು ಜನ್ಮೇಜಾ ಸೆಖೋನ್ ಅವರು 'ಸೇವಾದಾರ್' ಸಮವಸ್ತ್ರವನ್ನು ಧರಿಸಿ ಪ್ರಾಯಶ್ಚಿತ್ತವಾಗಿ ಪಾತ್ರೆಗಳು ಮತ್ತು ಬೂಟುಗಳನ್ನು ಸ್ವಚ್ಛಗೊಳಿಸುವ 'ಸೇವೆ' ಮಾಡಲು ಆದೇಶಿಸಲಾಗಿದೆ. ಇದಕ್ಕೂ ಮುನ್ನ ಸುಖಬೀರ್ ಬಾದಲ್ ಗಾಲಿಕುರ್ಚಿಯಲ್ಲಿ ಅಕಾಲ್ ತಖ್ತ್ ಸಾಹಿಬ್​ಗೆ ಆಗಮಿಸಿದ್ದರು.

ಸುಖಬೀರ್ ಬಾದಲ್ ಅವರಲ್ಲದೆ, ತಮ್ಮ ಪಕ್ಷದ ಇತರ ಸದಸ್ಯರನ್ನು ಮತ್ತು ಶಿರೋಮಣಿ ಗುರುದ್ವಾರ ಪ್ರಬಂಧಕ್ ಸಮಿತಿಯ (ಎಸ್ಜಿಪಿಸಿ) ಪ್ರಮುಖ ವ್ಯಕ್ತಿಗಳನ್ನು ಧಾರ್ಮಿಕ ಉಲ್ಲಂಘನೆಯ ಆರೋಪಗಳಿಗೆ ಸಂಬಂಧಿಸಿದಂತೆ ವಿವರಣೆ ನೀಡುವಂತೆ ಗ್ಯಾನಿ ರಘಬೀರ್ ಸಿಂಗ್ ಕರೆಸಿದ್ದರು.

ಸ್ವಯಂ ಘೋಷಿತ ದೇವಮಾನವ ಮತ್ತು ಡೇರಾ ಸಚ್ಚಾ ಸೌದಾ ಮುಖ್ಯಸ್ಥ ಗುರ್ಮೀತ್ ರಾಮ್ ರಹೀಮ್ ಸಿಂಗ್ ಅವರು 2007ರಲ್ಲಿ ಡೇರಾದಲ್ಲಿ ಗುರು ಗೋವಿಂದ್ ಸಿಂಗ್ ಅವರ ಅನುಕರಣೆಯನ್ನು ಮಾಡಿದ್ದಾರೆ ಮತ್ತು 2015ರಲ್ಲಿ ಗುರು ಗ್ರಂಥ ಸಾಹಿಬ್ ಗೆ ಅಪಮಾನ ಮಾಡಲಾಗಿದೆ ಎಂದು ಆರೋಪಿಸಿ ಎಸ್ಎಡಿ ಬಂಡುಕೋರರು ಮತ್ತು ಹಲವಾರು ಸಿಖ್ ಸಂಘಟನೆಗಳು ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಯುವಂತೆ ಸುಖ ಬೀರ್ ಬಾದಲ್ ಅವರನ್ನು ಒತ್ತಾಯಿಸುತ್ತಿವೆ.

ಇದನ್ನೂ ಓದಿ: ಮೃತ ಶಾಸಕರ ಪುತ್ರನ ಸರ್ಕಾರಿ ನೌಕರಿ ರದ್ದುಗೊಳಿಸಿದ ಸುಪ್ರೀಂ ಕೋರ್ಟ್: ಕೇರಳ ಸಿಎಂ ವಿಜಯನ್​ಗೆ ಮುಖಭಂಗ

ABOUT THE AUTHOR

...view details