ಮುಂಬೈ(ಮಹಾರಾಷ್ಟ್ರ): ಮಹಾರಾಷ್ಟ್ರದ ಉಪಮುಖ್ಯಮಂತ್ರಿ ಅಜಿತ್ ಪವಾರ್ ನೇತೃತ್ವದ ಬಣವೇ 'ನಿಜವಾದ ಎನ್‌ಸಿಪಿ' ಎಂದು ವಿಧಾನಸಭೆ ಸ್ಪೀಕರ್ ರಾಹುಲ್ ನಾರ್ವೇಕರ್ ಗುರುವಾರ ಘೋಷಿಸಿದರು. ಇದೇ ವೇಳೆ, ಅಜಿತ್ ಪವಾರ್ ಗುಂಪಿನ ಶಾಸಕರ ಅರ್ಹತೆಯನ್ನೂ ಅವರು ಎತ್ತಿಹಿಡಿದ್ದಾರೆ.
ಸ್ಪೀಕರ್ ತೀರ್ಪಿನಿಂದ ಪಕ್ಷದ ಸಂಸ್ಥಾಪಕರಾದ ಮಾಜಿ ಮುಖ್ಯಮಂತ್ರಿ, ಹಿರಿಯ ನಾಯಕ ಶರದ್ ಪವಾರ್ ನೇತೃತ್ವದ ಎನ್‌ಸಿಪಿ ಬಣಕ್ಕೆ ದೊಡ್ಡ ಹಿನ್ನಡೆ ಉಂಟಾಗಿದೆ. ''ಅಜಿತ್ ಪವಾರ್ ಬಣವು 43 ಶಾಸಕರು ಮತ್ತು ಆರು ಜನ ವಿಧಾನ ಪರಿಷತ್ ಸದಸ್ಯರ ಬೆಂಬಲ ಹೊಂದಿದೆ. ಹೀಗಾಗಿ ಪಕ್ಷವು ಶರದ್ ಪವಾರ್ ಅವರ ಅಣ್ಣನ ಮಗನಾದ ಅಜಿತ್ ಪವಾರ್ ಅವರಿಗೆ ಸೇರಿದೆ'' ಎಂದು ಸ್ಪೀಕರ್ ಆದೇಶಿಸಿದ್ದಾರೆ.
ಅಷ್ಟೇ ಅಲ್ಲ, ''ಶಾಸಕರ ಅನರ್ಹತೆ ಕೋರಿ ಸಲ್ಲಿಸಲಾದ ಎಲ್ಲ ಅರ್ಜಿಗಳನ್ನು ತಿರಸ್ಕರಿಸಲಾಗಿದೆ. ಈ ಎನ್‌ಸಿಪಿ ಪ್ರಕರಣದಲ್ಲಿ ರಾಜಕೀಯ ಪಕ್ಷಗಳು ಸಂವಿಧಾನದ 10ನೇ ಅನುಚ್ಛೇದದ ನಿಬಂಧನೆಗಳ ದುರುಪಯೋಗ ಸ್ಪಷ್ಟವಾಗಿ ಕಂಡುಬಂದಿದೆ. ಶರದ್ ಪವಾರ್ ಅವರ ನಿರ್ಧಾರವನ್ನು ಪ್ರಶ್ನಿಸುವುದು ಅಥವಾ ಅವರ ಇಚ್ಛೆಯನ್ನು ಧಿಕ್ಕರಿಸುವುದು ಪಕ್ಷಾಂತರವಾಗಲು ಸಾಧ್ಯವಿಲ್ಲ. ಪಕ್ಷದ ನಾಯಕತ್ವವು ಅನರ್ಹಗೊಳಿಸುವ ಬೆದರಿಕೆಯ ಮೂಲಕ ಹೆಚ್ಚಿನ ಸಂಖ್ಯೆಯ ಸದಸ್ಯರ ಭಿನ್ನಾಭಿಪ್ರಾಯವನ್ನು ಹತ್ತಿಕ್ಕಲು 10ನೇ ಅನುಚ್ಛೇದವನ್ನು ಬಳಸಲು ಸಹ ಆಗುವುದಿಲ್ಲ'' ಎಂದು ಸಭಾಧ್ಯಕ್ಷ ನಾರ್ವೇಕರ್ ತಿಳಿಸಿದ್ದಾರೆ.
ಇದನ್ನೂ ಓದಿ:ಅಜಿತ್ ಪವಾರ್ ಬಣವೇ ನಿಜವಾದ ಎನ್‌ಸಿಪಿ-ಚುನಾವಣಾ ಆಯೋಗ; ಶರದ್ ಪವಾರ್‌ಗೆ ಹಿನ್ನಡೆ