ಹೈದರಾಬಾದ್:ಭಾರತದ ವೈವಿಧ್ಯತೆಯನ್ನು ವಿವರಿಸಲು ಭಾರತೀಯರನ್ನು ಬೇರೆ ರಾಷ್ಟ್ರದವರಿಗೆ ಹೋಲಿಕೆ ಮಾಡಿದ್ದ ಎಡವಟ್ಟು ಕಾಂಗ್ರೆಸ್ ಹಿರಿಯ ನಾಯಕ ಸ್ಯಾಮ್ ಪಿತ್ರೋಡಾ ತಮ್ಮ ಭಾರತೀಯ ಸಾಗರೋತ್ತರ ಕಾಂಗ್ರೆಸ್ ಅಧ್ಯಕ್ಷ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ. ಇವರ ರಾಜೀನಾಮೆಯನ್ನು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅಂಗೀಕರಿಸಿದ್ದಾರೆ.
ಲೋಕಸಭೆ ಚುನಾವಣೆಯ ಸಂದರ್ಭದಲ್ಲಿ ಪತ್ರಿಕೆಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಸ್ಯಾಮ್ ಪಿತ್ರೋಡಾ, ಪೂರ್ವ ಭಾರತೀಯರು ಚೀನಿಯರಂತೆ, ದಕ್ಷಿಣ ಜನತೆ ಆಫ್ರಿಕನ್ನರಂತೆ ಕಾಣುತ್ತಾರೆ ಎಂದು ಹೇಳುವ ಮೂಲಕ ವಿವಾದ ಸೃಷ್ಟಿಸಿದ್ದರು. ಈ ಹೇಳಿಕೆಯನ್ನೇ ಮುಂದಿಟ್ಟುಕೊಂಡು ಪ್ರಧಾನಿ ಮೋದಿ ಹಾಗೂ ಬಿಜೆಪಿ ನಾಯಕರು ಕಾಂಗ್ರೆಸ್ ವಿರುದ್ಧ ಮುಗಿಬಿದ್ದಿದ್ದರು. ಅಲ್ಲದೇ, ಇದೊಂದು ಜನಾಂಗೀಯ ಹೇಳಿಕೆ ಎಂದು ಬಿಜೆಪಿಯವರು ಆಕ್ರೋಶ ವ್ಯಕ್ತಪಡಿಸಿದ್ದರು. ಮತ್ತೊಂದೆಡೆ, ಕಾಂಗ್ರೆಸ್ ಪಕ್ಷವು ಸ್ಯಾಮ್ ಪಿತ್ರೋಡಾ ಹೇಳಿಕೆಯಿಂದ ಸಂಪೂರ್ಣವಾಗಿ ಅಂತರ ಕಾಯ್ದುಕೊಂಡಿತ್ತು.
ಇದರ ಬೆನ್ನಲ್ಲೇ ಸ್ಯಾಮ್ ಪಿತ್ರೋಡಾ, ಭಾರತೀಯ ಸಾಗರೋತ್ತರ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಕೊಟ್ಟಿದ್ದಾರೆ. ಈ ಬಗ್ಗೆ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಮಾಹಿತಿ ನೀಡಿದ್ದಾರೆ. ಸ್ಯಾಮ್ ಪಿತ್ರೋಡಾ ಅವರು ತಮ್ಮ ಸ್ವಂತ ಇಚ್ಛೆಯಿಂದ ಭಾರತೀಯ ಸಾಗರೋತ್ತರ ಕಾಂಗ್ರೆಸ್ ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಯಲು ನಿರ್ಧರಿಸಿದ್ದಾರೆ. ಕಾಂಗ್ರೆಸ್ ಅಧ್ಯಕ್ಷರು ಇವರು ನಿರ್ಧಾರವನ್ನು ಒಪ್ಪಿಕೊಂಡಿದ್ದಾರೆ" ಎಂದು ಜೈರಾಮ್ ರಮೇಶ್ ಸಾಮಾಜಿಕ ಜಾಲತಾಣದ 'ಎಕ್ಸ್'ನಲ್ಲಿ ಪೋಸ್ಟ್ ಮಾಡಿದ್ದಾರೆ.