ನವದೆಹಲಿ: ನನ್ನ ಜೀವನದಲ್ಲಿ ನಾನು ಅನೇಕ ಕಷ್ಟಗಳನ್ನು ಎದುರಿಸಿದ್ದೇನೆ. ಆದರೆ, ದೇವರು ನನ್ನನ್ನು ಪ್ರತಿ ಹಂತದಲ್ಲೂ ಬೆಂಬಲಿಸಿದ್ದಾನೆ. ಈ ಬಾರಿಯೂ ದೇವರು ನನ್ನನ್ನು ಕೈಬಿಡಲಿಲ್ಲ, ಏಕೆಂದರೆ ನಾನು ಪ್ರಾಮಾಣಿಕನಾಗಿದ್ದೇನೆ ಎಂದು ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಹೇಳಿದ್ದಾರೆ.
ದೆಹಲಿಯ ತಿಹಾರ್ ಜೈಲಿನ ಹೊರಗೆ ಪಕ್ಷದ ಕಾರ್ಯಕರ್ತರು ಮತ್ತು ಮುಖಂಡರನ್ನು ಉದ್ದೇಶಿಸಿ ಅವರು ಮಾತನಾಡಿದರು. ಎಎಪಿ ರಾಷ್ಟ್ರೀಯ ಸಂಚಾಲಕ ಅರವಿಂದ್ ಕೇಜ್ರಿವಾಲ್ ಅವರಿಗೆ ದೆಹಲಿ ಅಬಕಾರಿ ನೀತಿ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ಇಂದು ಜಾಮೀನು ನೀಡಿದೆ.
ಭರ್ಜರಿ ಸ್ವಾಗತ ಕೋರಿದ ಎಎಪಿ ಬೆಂಬಲಿಗರು:ಇದಕ್ಕೂ ಮುನ್ನ ಮಳೆಯ ನಡುವೆ ಅರವಿಂದ್ ಕೇಜ್ರಿವಾಲ್ ಅವರನ್ನು ಸ್ವಾಗತಿಸಲು ಪಂಜಾಬ್ ಸಿಎಂ ಭಗವಂತ್ ಮಾನ್, ಮಾಜಿ ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ, ಸಂಸದ ಸಂಜಯ್ ಸಿಂಗ್ ಸೇರಿದಂತೆ ಆಪ್ ಕಾರ್ಯಕರ್ತರು ಮತ್ತು ಮುಖಂಡರು ತಿಹಾರ್ ಜೈಲಿನ ಹೊರಗೆ ಹಾಜರಾಗಿದ್ದರು. ದೆಹಲಿ ಅಬಕಾರಿ ನೀತಿ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ಜಾಮೀನು ನೀಡಿದ ನಂತರ ಕೇಜ್ರಿವಾಲ್ ಇಂದು ತಿಹಾರ್ ಜೈಲಿನಿಂದ ಬಿಡುಗಡೆಯಾದರು.
ಕೇಜ್ರಿವಾಲ್ ಜೈಲಿನಿಂದ ಹೊರಬರುತ್ತಿದ್ದಂತೆ ನೂರಾರು ಎಎಪಿ ಕಾರ್ಯಕರ್ತರು ಮತ್ತು ಮುಖಂಡರು ‘ಭಾರತ್ ಮಾತಾ ಕಿ ಜೈ’ ಮತ್ತು ವಂದೇ ಮಾತರಂ ಘೋಷಣೆಗಳನ್ನು ಕೂಗುತ್ತಾ ಅವರನ್ನು ಭರ್ಜರಿಯಾಗೇ ಸ್ವಾಗತಿಸಿದರು. ಪಕ್ಷದ ಕಾರ್ಯಕರ್ತರು ಅವರ ಬಿಡುಗಡೆಯನ್ನು ಸಂಭ್ರಮಿಸಿದರು. ಜೈಲುವಾಸದಿಂದ ಅವರ ಧೈರ್ಯ ಮತ್ತು ಚೈತನ್ಯ ಮತ್ತಷ್ಟು ಗಟ್ಟಿಯಾಗಿದೆ. ರಾಷ್ಟ್ರಕ್ಕೆ ಸೇವೆ ಸಲ್ಲಿಸಲು ಹೆಚ್ಚು ಶಕ್ತಿ ಮತ್ತು ಚೈತನ್ಯ ಅವರಿಗೆ ಸಿಕ್ಕಿದೆ ಎಂದು ಅಭಿಮಾನಿಗಳು ಗುಡುಗಿದರು.