ಚೆನ್ನೈ: ವಕೀಲರ ತಿದ್ದುಪಡಿ ಮಸೂದೆ 2025ರ ಬಗ್ಗೆ ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಭಾನುವಾರ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದು, ಇದು ಕಾನೂನು ವೃತ್ತಿಯ ಸ್ವಾಯತ್ತತೆಯ ಮೇಲಿನ ನೇರ ದಾಳಿ ಎಂದು ಆರೋಪಿಸಿದ್ದಾರೆ. ತಮಿಳುನಾಡು ಮತ್ತು ಪುದುಚೇರಿಯ ಬಾರ್ ಕೌನ್ಸಿಲ್ ಅನ್ನು ಮದ್ರಾಸ್ ಬಾರ್ ಕೌನ್ಸಿಲ್ ಎಂದು ಮರುನಾಮಕರಣ ಮಾಡಲು ಪ್ರಸ್ತಾಪಿಸುವ ಈ ಮಸೂದೆಯಲ್ಲಿ ಬಿಜೆಪಿಯ ತಮಿಳು ದ್ವೇಷವು ಸ್ಪಷ್ಟವಾಗಿ ಕಾಣಿಸುತ್ತಿದೆ ಎಂದು ಅವರು ಹೇಳಿದ್ದಾರೆ.
"ತಮಿಳುನಾಡು ಕೇವಲ ಹೆಸರಲ್ಲ; ಅದು ನಮ್ಮ ಗುರುತಾಗಿದೆ!" ಎಂದು ಅವರು ಹೇಳಿದರು.
"2014 ರಿಂದ ಬಿಜೆಪಿಯ ಕೇಂದ್ರ ಸರ್ಕಾರವು ನ್ಯಾಯಾಂಗದ ಸ್ವಾತಂತ್ರ್ಯವನ್ನು ವ್ಯವಸ್ಥಿತವಾಗಿ ದುರ್ಬಲಗೊಳಿಸುತ್ತಿದೆ. ಮೊದಲು ಎನ್ಜೆಎಸಿ ಮೂಲಕ ನ್ಯಾಯಾಂಗ ನೇಮಕಾತಿಗಳನ್ನು ಹೈಜಾಕ್ ಮಾಡಲು ಪ್ರಯತ್ನಿಸುವ ಮೂಲಕ, ನಂತರ ನ್ಯಾಯಾಂಗ ನೇಮಕಾತಿ ಮತ್ತು ವರ್ಗಾವಣೆಗಾಗಿ ಕೊಲಿಜಿಯಂನ ಶಿಫಾರಸುಗಳನ್ನು ನಿರ್ಲಕ್ಷಿಸುವ ಮೂಲಕ ಕೇಂದ್ರವು ನ್ಯಾಯಾಂಗದ ಸ್ವಾತಂತ್ರ್ಯವನ್ನು ವ್ಯವಸ್ಥಿತವಾಗಿ ದುರ್ಬಲಗೊಳಿಸುತ್ತಿದೆ" ಎಂದು ಸಿಎಂ ಆರೋಪಿಸಿದರು.
‘"ಈಗ, ಬಾರ್ ಕೌನ್ಸಿಲ್ಗಳ ಮೇಲೆ ನಿಯಂತ್ರಣವನ್ನು ಪಡೆಯುವ ಮೂಲಕ, ಕಾನೂನು ವೃತ್ತಿಯ ಸ್ವಾಯತ್ತತೆಯನ್ನು ನಾಶಪಡಿಸುವ ಮೂಲಕ ನ್ಯಾಯಾಂಗ ಸ್ವಾತಂತ್ರ್ಯವನ್ನು ದುರ್ಬಲಗೊಳಿಸುವ ಗುರಿಯನ್ನು ಈ ಮಸೂದೆ ಹೊಂದಿದೆ" ಎಂದು ಅವರು ಹೇಳಿದರು.