ಮಂಡಿ (ಹಿಮಾಚಲ ಪ್ರದೇಶ): ಚಿತ್ರನಟಿ ಹಾಗೂ ಬಿಜೆಪಿ ಸಂಸದೆ ಕಂಗನಾ ರಣಾವತ್ ಅವರು ರೈತರ ಪ್ರತಿಭಟನೆಯನ್ನು ಬಾಂಗ್ಲಾದೇಶದ ದಂಗೆಗೆ ಹೋಲಿಸುವ ಮೂಲಕ ಮತ್ತೊಂದು ವಿವಾದಕ್ಕೆ ದಾರಿ ಮಾಡಿಕೊಟ್ಟಿದ್ದಾರೆ.
ಸಂದರ್ಶನದಲ್ಲಿ ಮಾತನಾಡಿದ ಅವರು, ರೈತರ ಚಳವಳಿಯನ್ನು ನಿಯಂತ್ರಿಸಲು ಕೇಂದ್ರ ಸರ್ಕಾರ ಕಠಿಣ ಕ್ರಮಗಳನ್ನು ತೆಗೆದುಕೊಳ್ಳದೇ ಹೋಗದಿದ್ದರೆ, ಇಂದು ಚಳವಳಿಯು ದೇಶದಲ್ಲಿ ಬಾಂಗ್ಲಾದೇಶದಂತಹ ಪರಿಸ್ಥಿತಿಗೆ ಕಾರಣವಾಗುತ್ತಿತ್ತು. ದೇಶದಲ್ಲಿ ನಡೆಯುತ್ತಿರುವ ರೈತರ ಹೋರಾಟಗಳ ಹಿಂದೆ ಚೀನಾ ಮತ್ತು ಅಮೆರಿಕದಂತಹ ವಿದೇಶಿ ಶಕ್ತಿಗಳ ಕೈವಾಡವಿದೆ ಎಂದು ಹೇಳುವ ಮೂಲಕ ರೈತರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.
ಕಂಗನಾ ತಮ್ಮ ಎಕ್ಸ್ (ಟ್ವಿಟರ್) ಖಾತೆಯಲ್ಲಿ ಈ ವಿಡಿಯೋವನ್ನು ಪೋಸ್ಟ್ ಮಾಡಿಕೊಂಡಿದ್ದು, ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಪ್ರತಿಪಕ್ಷ ಸೇರಿದಂತೆ ಹಲವು ರೈತ ಮುಖಂಡರು ಕಂಗನಾ ಹೇಳಿಕೆಗೆ ಕಿಡಿಕಾರಿವೆ. ಸ್ವಪಕ್ಷ ಬಿಜೆಪಿ ಕೂಡ ಅವರ ಹೇಳಿಕೆಗೆ ವಿರೋಧ ವ್ಯಕ್ತಪಡಿಸಿದೆ. ಹರಿಯಾಣ ಸೇರಿದಂತೆ ಕೆಲವು ರಾಜ್ಯಗಳ ವಿಧಾನಸಭಾ ಚುನಾವಣೆ ಘೋಷಣೆಯಾಗಿದ್ದರಿಂದ ಇವರ ಹೇಳಿಕೆ ಈಗ ಚೆರ್ಚೆಗೆ ಗ್ರಾಸವಾಗಿದೆ.
ಕಂಗನಾ ಹೇಳಿಕೆಗೆ ಬಿಜೆಪಿ ಪಕ್ಷದಲ್ಲೇ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಹರಿಯಾಣ ಬಿಜೆಪಿ ಘಟಕದ ಹಿರಿಯ ನಾಯಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಚುನಾವಣಾ ಸಮಯದಲ್ಲಿ ಬಿಜೆಪಿ ಸಂಸದರು ಇಂತಹ ಹೇಳಿಕೆಗಳನ್ನು ನೀಡುವ ಅಗತ್ಯವಿಲ್ಲ ಎಂದಿರುವ ಬಿಜೆಪಿ ನಾಯಕರು, ಕಂಗನಾ ಅವರ ಹೇಳಿಕೆ ಕುರಿತು ವರಿಷ್ಠರೊಂದಿಗೆ ಚರ್ಚಿಸುತ್ತೇವೆ ಎಂದಿದ್ದಾರೆ. ಬಿಜೆಪಿ ಹೈಕಮಾಂಡ್ ಕೂಡ ಭವಿಷ್ಯದಲ್ಲಿ ಅಂತಹ ಹೇಳಿಕೆಗಳನ್ನು ನೀಡದಂತೆ ಅವರಿಗೆ ಸೂಚಿಸಲಾಗಿದೆ ಎಂದು ಹೇಳಿದೆ.
ಕಾಂಗ್ರೆಸ್ ನಾಯಕರು ಸೇರಿದಂತೆ ಹಲವರು ಕಂಗನಾ ವಿರುದ್ಧ ಪ್ರಕರಣ ದಾಖಲಿಸುವಂತೆ ಒತ್ತಾಯಿಸಿದ್ದಾರೆ. ಕಂಗನಾ ಅವರ ಹೇಳಿಕೆಯನ್ನು ಖಂಡಿಸಿರುವ ಕಾಂಗ್ರೆಸ್ ನಾಯಕ ರಾಜ್ ಕುಮಾರ್ ವರ್ಕಾ, ಈ ಬಗ್ಗೆ ತನಿಖೆ ನಡೆಸಿ ಅವರ ವಿರುದ್ಧ ಪ್ರಕರಣ ದಾಖಲಿಸಿ ದಿಬ್ರುಗಢ ಜೈಲಿಗೆ ಕಳುಹಿಸುವಂತೆ ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಅವರಿಗೆ ಮನವಿ ಮಾಡಿದ್ದಾರೆ.