ನವದೆಹಲಿ: ಆಮ್ ಆದ್ಮಿ ಪಕ್ಷ (ಎಎಪಿ) ಸ್ಥಾಪನೆಯಾಗಿ ಇಂದಿಗೆ 12 ವರ್ಷಗಳು ಪೂರ್ಣಗೊಂಡಿವೆ. ಆಪ್ ಡಿಸೆಂಬರ್ 28, 2013 ರಂದು ಮೊದಲ ಬಾರಿಗೆ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಅಧಿಕಾರ ಹಿಡಿಯುವ ಮೂಲಕ ಮುನ್ನುಡಿ ಬರೆಯಿತು.
ಅಂದು ಪಕ್ಷದ ಸಂಚಾಲಕ ಅರವಿಂದ್ ಕೇಜ್ರಿವಾಲ್ ಮುಖ್ಯಮಂತ್ರಿಯಾಗಿ ಮತ್ತು ಪಕ್ಷದ ಹಿರಿಯ ನಾಯಕರು ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ್ದರು. ಮೊದಲ ಅವಧಿಯಲ್ಲಿ ಈ ಸರ್ಕಾರ ಕೇವಲ 49 ದಿನಗಳ ಕಾಲ ಮಾತ್ರ ಅಧಿಕಾರದಲ್ಲಿತ್ತು. ಸದ್ಯ ಆಪ್ ದೆಹಲಿ ಮಾತ್ರವಲ್ಲದೇ ಪಂಜಾಬ್‌ನಲ್ಲಿಯೂ ಅಧಿಕಾರಕ್ಕೇರಿ, ಬಿಜೆಪಿ ಮತ್ತು ಕಾಂಗ್ರೆಸ್ ನಂತರದ ದೇಶದ ಮೂರನೇ ಅತಿದೊಡ್ಡ ರಾಜಕೀಯ ಪಕ್ಷವಾಗಿ ಹೊರಹೊಮ್ಮಿದೆ.
ಆಪ್ ಹುಟ್ಟಿದ್ದು ಹೇಗೆ?:ಸಾಮಾಜಿಕ ಕಾರ್ಯಕರ್ತ ಅಣ್ಣಾ ಹಜಾರೆ ಅವರ ನೇತೃತ್ವದಲ್ಲಿ ಲೋಕಪಾಲ್, ಚುನಾವಣಾ ಸುಧಾರಣೆಗಳು ಜಾರಿಗೆ ತರಬೇಕು ಮತ್ತು ರೈತರ ಬೇಡಿಕೆಗಳನ್ನು ಈಡೇರಿಸಬೇಕೆಂದು ದೊಡ್ಡ ಚಳವಳಿ ನಡೆಯುತ್ತಿದ್ದ ಸಮಯದಲ್ಲಿ ಆಮ್ ಆದ್ಮಿ ಪಕ್ಷ ಹುಟ್ಟಿಕೊಂಡಿತು. ಅರವಿಂದ್ ಕೇಜ್ರಿವಾಲ್ ಈ ಚಳವಳಿಯಲ್ಲಿ ಸಕ್ರಿಯವಾಗಿ ಭಾಗವಹಿಸಿದ್ದರು. ಈ ಸಮಸ್ಯೆಗಳನ್ನು ಪರಿಹರಿಸುವ ಉದ್ದೇಶದಿಂದ ಆಮ್ ಆದ್ಮಿ ಪಕ್ಷವನ್ನು ನವೆಂಬರ್ 26, 2012 ರಂದು ಸ್ಥಾಪಿಸಲಾಯಿತು.
ಆಮ್ ಆದ್ಮಿ ಪಕ್ಷದ ಇಲ್ಲಿಯವರೆಗೆ ರಾಜಕೀಯ ಪ್ರಯಾಣ:2013ರ ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಎಎಪಿ 70 ಸ್ಥಾನಗಳ ಪೈಕಿ 28 ಸ್ಥಾನಗಳನ್ನು ಗೆಲ್ಲುವ ಮೂಲಕ ಹೊಸ ರಾಜಕೀಯ ಅಲೆಯನ್ನು ಸೃಷ್ಟಿಸಿತು. ಬಿಜೆಪಿ 34 ಸ್ಥಾನಗಳನ್ನು ಗೆದ್ದಿತು ಮತ್ತು ಕಾಂಗ್ರೆಸ್ ಕೇವಲ 8 ಸ್ಥಾನಗಳಿಗೆ ಸೀಮಿತವಾಗಿತ್ತು. ಕಾಂಗ್ರೆಸ್ ಬೆಂಬಲದೊಂದಿಗೆ ಎಎಪಿ ದೆಹಲಿಯಲ್ಲಿ ಸರ್ಕಾರ ರಚಿಸಿತು. ಆದರೆ, ಈ ಸರ್ಕಾರವು ಕೇವಲ 49 ದಿನಗಳವರೆಗೆ ಮಾತ್ರ ಅಧಿಕಾರದಲ್ಲಿತ್ತು.
2015ರ ವಿಧಾನಸಭಾ ಚುನಾವಣೆಯಲ್ಲಿ ಎಎಪಿ 70 ಕ್ಷೇತ್ರಗಳ ಪೈಕಿ 67 ಕ್ಷೇತ್ರಗಳಲ್ಲಿ ಅಭೂತಪೂರ್ವ ಜಯ ಗಳಿಸಿ ಇತಿಹಾಸ ಸೃಷ್ಟಿಸಿತು. 2020ರಲ್ಲಿ, ಎಎಪಿ 62 ಸ್ಥಾನಗಳನ್ನು ಗೆಲ್ಲುವ ಮೂಲಕ ದೆಹಲಿಯಲ್ಲಿ ಮತ್ತೆ ಅಧಿಕಾರ ಹಿಡಿಯುವಲ್ಲಿ ಯಶಸ್ವಿಯಾಯಿತು.
ಪಕ್ಷ ಎದುರಿಸಿದ ಸಾವಲುಗಳು:ಆದರೆ, ಆಮ್ ಆದ್ಮಿ ಪಕ್ಷ ತನ್ನ 12 ವರ್ಷಗಳ ಪಯಣದಲ್ಲಿ ಹಲವು ಏರಿಳಿತಗಳನ್ನು ಕಂಡಿದೆ. ಇತ್ತೀಚೆಗೆ ಹಿರಿಯ ನಾಯಕ ಮತ್ತು ದೆಹಲಿ ಸಾರಿಗೆ ಸಚಿವರಾಗಿದ್ದ ಕೈಲಾಶ್ ಗೆಹ್ಲೋಟ್ ಪಕ್ಷವನ್ನು ತೊರೆದು ಬಿಜೆಪಿ ಸೇರ್ಪಡೆಗೊಂಡಿದ್ದು, ಆಪ್ಗೆ ದೊಡ್ಡ ಆಘಾತ ಉಂಟು ಮಾಡಿದೆ. 'ನಾವು ಜನರ ಹಕ್ಕುಗಳಿಗಾಗಿ ಹೋರಾಡುತ್ತಿಲ್ಲ, ರಾಜಕೀಯ ಅಜೆಂಡಾಕ್ಕಾಗಿ ಮಾತ್ರ ಹೋರಾಡುತ್ತಿದ್ದೇವೆ’ ಎಂದು ಕೈಲಾಶ್ ಗೆಹ್ಲೋಟ್ ತಮ್ಮ ರಾಜೀನಾಮೆ ಪತ್ರದಲ್ಲಿ ತಿಳಿಸಿದ್ದರು.