ನವದೆಹಲಿ:ಇಲ್ಲಿನ ವಿಕಾಸಪುರಿಯಲ್ಲಿ ನಡೆದ ರ್ಯಾಲಿಯಲ್ಲಿ ದೆಹಲಿಯ ಮಾಜಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ಮೇಲೆ ಬಿಜೆಪಿ ಯುವ ಮೋರ್ಚಾ ಕಾರ್ಯಕರ್ತರು ಹಲ್ಲೆ ನಡೆಸಿದ್ದಾರೆ ಎಂದು ಆಮ್ ಆದ್ಮಿ ಪಕ್ಷ (ಎಎಪಿ) ಆರೋಪಿಸಿದೆ. ಆದರೆ, ಇದನ್ನು ಬಿಜೆಪಿ ನಿರಾಕರಿಸಿದೆ.
ಪಾದಯಾತ್ರೆಯ ವೇಳೆ ಬಿಜೆಪಿ ಕಾರ್ಯಕರ್ತರು ಆಪ್ ಮುಖ್ಯಸ್ಥರ ಮೇಲೆ ಹಲ್ಲೆ ನಡೆಸಿದ್ದಾರೆ. ಆದರೆ, ದುಷ್ಕರ್ಮಿಗಳ ವಿರುದ್ಧ ದೆಹಲಿ ಪೊಲೀಸರು ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ದೆಹಲಿ ಮುಖ್ಯಮಂತ್ರಿ ಅತಿಶಿ ಕಿಡಿಕಾರಿದ್ದಾರೆ.
ಸುದ್ದಿಗೋಷ್ಟಿಯಲ್ಲಿ ಬಿಜೆಪಿ ವಿರುದ್ಧ ಹರಿಹಾಯ್ದ ಸಿಎಂ ಅತಿಶಿ, ಕೆಲವು ಬಿಜೆಪಿ ಕಾರ್ಯಕರ್ತರು ಅರವಿಂದ್ ಕೇಜ್ರಿವಾಲ್ ವಿರುದ್ಧ ಘೋಷಣೆ ಕೂಗಿದರು. ಬಳಿಕ ಹಲ್ಲೆ ನಡೆಸಿದರು. ಕೇಜ್ರಿವಾಲ್ ಅವರನ್ನು ಮುಗಿಸುವ ಪ್ರಯತ್ನ ನಡೆಸಲಾಗಿತ್ತು. ಸುಳ್ಳು ಪ್ರಕರಣ ದಾಖಲಿಸಿ ಜೈಲಿಗೆ ಕಳುಹಿಸಿದಾಗಲೂ, ಅನಾರೋಗ್ಯವಿದ್ದರೂ ಚಿಕಿತ್ಸೆ ನೀಡಲಾಗಿಲ್ಲ. ಈಗ ಅವರ ಮತ್ತೆ ಟಾರ್ಗೆಟ್ ಮಾಡಲಾಗಿದೆ ಎಂದು ಗಂಭೀರ ಆರೋಪ ಮಾಡಿದರು.
ಬಿಜೆಪಿಯೇ ಹೊಣೆ:ಎಎಪಿ ನಾಯಕ ಸಂಜಯ್ ಸಿಂಗ್ ಕೂಡ ಘಟನೆಯ ಬಗ್ಗೆ ಪ್ರತಿಕ್ರಿಯಿಸಿದ್ದು, "ಬಿಜೆಪಿಗರು ಅರವಿಂದ್ ಕೇಜ್ರಿವಾಲ್ ಅವರ ಶತ್ರುಗಳಾಗಿದ್ದಾರೆ. ಮೊದಲು ಇಡಿ-ಸಿಬಿಐ ಬಳಸಿ ಸುಳ್ಳು ಕೇಸುಗಳನ್ನು ಹಾಕಿ, ಜೈಲಿಗೆ ಹಾಕಿದರು. ಅವರಿಗೆ ಸಕ್ಕರೆ ಕಾಯಿಲೆ ಇದ್ದರೂ ಇನ್ಸುಲಿನ್ ನಿಲ್ಲಿಸಿ ಹತ್ಯೆಗೆ ಯತ್ನಿಸಿದರು. ಇದೀಗ ಆ ಪಕ್ಷದ ಗೂಂಡಾಗಳು ದಾಳಿ ನಡೆಸಿದ್ದಾರೆ. ಕೇಜ್ರಿವಾಲ್ ಅವರನ್ನು ಮುಗಿಸಲು ಬಿಜೆಪಿ ಬಯಸುತ್ತಿದೆ. ಅರವಿಂದ್ ಕೇಜ್ರಿವಾಲ್‌ಗೆ ಏನಾದರೂ ಸಂಭವಿಸಿದರೆ ಅದಕ್ಕೆ ಬಿಜೆಪಿಯೇ ಹೊಣೆಯಾಗಬೇಕಾಗುತ್ತದೆ" ಎಂದು ಹೇಳಿದ್ದಾರೆ.