ಅಹಮದಾಬಾದ್ (ಗುಜರಾತ್): ಜೀವನ ಎಲ್ಲರಿಗೂ ಒಂದೇ ರೀತಿ ಇರುವುದಿಲ್ಲ. ಎಲ್ಲವೂ ಸುಸೂತ್ರವಾಗಿ ಸಾಗುತ್ತಿರುವಾಗ ಕೆಲವೊಂದು ಹಿನ್ನಡೆಗಳು ಎದುರಾಗುತ್ತವೆ ತಡೆಯೊಡ್ಡುತ್ತವೆ. ಇಂತಹವುಗಳಿಗೆ ಅಂಜದೆ ನಾವು ಧೈರ್ಯವಾಗಿ ನಿಂತರೆ ಮಾತ್ರ ಜೀವನದ ಬಂಡಿಯನ್ನು ಎಳೆಯಬಹುದು. ಪತಿ ಅನಾರೋಗ್ಯಕ್ಕೆ ಒಳಗಾದಾಗ ಮಹಿಳೆಯು ಕುಟುಂಬದ ಭಾರವನ್ನು ಹೊತ್ತು ಸಾಗುತ್ತಿದ್ದಾರೆ. ಕಷ್ಟಗಳಿಗೆ ಎದೆಗುಂದದೆ ನಗುನಗುತ್ತಲೇ ಸವಾಲುಗಳನ್ನು ಸ್ವೀಕರಿಸಿದರು. ಬೈಸಿಕಲ್ನ ಹ್ಯಾಂಡಲ್ ಅನ್ನು ಸಹ ಹಿಡಿಯಲು ಆಗದ ಆಕೆ ಈಗ ಏಕಾಏಕಿ ಕಾರಿನ ಸ್ಟೀರಿಂಗ್ ಹಿಡಿದು ಕುಟುಂಬದ ರಥವನ್ನು ಎಳೆಯುತ್ತಿದ್ದಾರೆ.
ನಡೆದಿದ್ದೇನು?:ಗುಜರಾತ್‌ನ ಅಹಮದಾಬಾದ್‌ನ ವ್ಯಕ್ತಿಯೊಬ್ಬರು ಕ್ಯಾಬ್ ಡ್ರೈವರ್ ಆಗಿ ಕೆಲಸ ಮಾಡುತ್ತಿದ್ದರು. ಬಂದ ಸಂಬಳದಲ್ಲಿ ತಮ್ಮ ಕುಟುಂಬದ ಜವಾಬ್ದಾರಿಯನ್ನು ಸುಖವಾಗಿಯೇ ನಿಭಾಯಿಸುತ್ತಿದ್ದರು. ಆದರೆ ಅವರಿಗೆ ಏಕಾಏಕಿ ಆರೋಗ್ಯದಲ್ಲಿ ಏರುಪೇರು ಉಂಟಾಗಿದೆ. ಈಗ ಅವರು ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದು, ಹಾಸಿಗೆ ಹಿಡಿದಿದ್ದಾರೆ. ಇದರಿಂದ ಅವರು ಸಂಸಾರ ಸಾಗಿಸಲು ತುಂಬಾ ಕಷ್ಟವಾಯಿತು. ಇನ್ನು ಗಂಡನ ಸ್ಥಿತಿ ಅರಿತ ಪತ್ನಿ ಅರ್ಚನಾ ಪಟೇಲ್ ಅವರು ಕ್ಯಾಬ್ ಓಡಿಸಲು ನಿರ್ಧರಿಸಿದ್ದರು. ಅವರು ಡ್ರೈವಿಂಗ್ ಕಲಿತು ಕೆಲವೇ ದಿನಗಳಲ್ಲಿ ಲೈಸೆನ್ಸ್ ಸಹ ಪಡೆದರು. ಒಂದು ದಿನ ತನ್ನ ಕ್ಯಾಬ್ ಬುಕ್ ಮಾಡಿದ ಗ್ರಾಹಕರೊಬ್ಬರು ಆ ಮಹಿಳೆಯೊಂದಿಗೆ ನಡೆಸಿದ ಸಂಭಾಷಣೆಯನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ. ಆಗ ಅವರ ಜೀವನ ಕಥೆ ಜಗತ್ತಿಗೆ ತಿಳಿಯಿತು.