ಹೈದರಾಬಾದ್: ತೆಲಂಗಾಣ ರಾಜ್ಯವು ಅನೇಕ ಜಾನಪದ ಕಲೆಗಳು ಮತ್ತು ಕರಕುಶಲ ವಸ್ತುಗಳಿಗೆ ನೆಲೆಯಾಗಿದೆ. ರಾಜ್ಯದ ಕೈಮಗ್ಗ ಉದ್ಯಮ ಬಹಳ ಪ್ರಸಿದ್ಧವಾಗಿದೆ. ರಾಷ್ಟ್ರಮಟ್ಟದಲ್ಲಿ ಮಾತ್ರವಲ್ಲದೆ ಅಂತಾರಾಷ್ಟ್ರೀಯ ಮಟ್ಟದಲ್ಲೂ ಹಲವು ಪ್ರಶಸ್ತಿಗಳನ್ನು ಪಡೆದಿದೆ. ಕೈಮಗ್ಗದಲ್ಲಿ ಚಿನ್ನದ ಸೀರೆಯನ್ನು ನೇಯುವ ಮೂಲಕ ಹೈದರಾಬಾದ್ನ ನೇಕಾರರೊಬ್ಬರು ಸುದ್ದಿಯಲ್ಲಿದ್ದಾರೆ.
ಇತ್ತೀಚೆಗೆ ರಾಜಣ್ಣ ಸಿರಿಸಿಲ್ಲ ಜಿಲ್ಲೆಯ ಸಿರಿಸಿಲ್ಲ ಪಟ್ಟಣದ ಕೈಮಗ್ಗ ಕಲಾವಿದ ನಲ್ಲ ವಿಜಯ್ ಕುಮಾರ್ ಅವರು 200 ಗ್ರಾಂ ಚಿನ್ನದಿಂದ ಚಿನ್ನದ ಸೀರೆ ತಯಾರಿಸಿ ಎಲ್ಲರ ಗಮನ ಸೆಳೆದಿದ್ದಾರೆ. ಹೈದರಾಬಾದ್ ಮೂಲದ ಉದ್ಯಮಿಯೊಬ್ಬರು ತಮ್ಮ ಮಗಳ ಮದುವೆಗೆ ಚಿನ್ನದ ಸೀರೆ ಕೊಡಿಸಲು ಆರು ತಿಂಗಳ ಹಿಂದೆ ನಲ್ಲ ವಿಜಯ್ ಕುಮಾರ್ ಅವರನ್ನು ಸಂಪರ್ಕಿಸಿದ್ದರು. ಚಿನ್ನದ ನೂಲು ತೆಗೆದು ಹೊಸ ವಿನ್ಯಾಸವನ್ನು ರಚಿಸಲು ಅವರು 10 ರಿಂದ 12 ದಿನಗಳನ್ನು ತೆಗೆದುಕೊಂಡಿದ್ದಾರೆ.
200 ಗ್ರಾಂ ಚಿನ್ನ ಬಳಕೆ; ಈ ಚಿನ್ನದ ಸೀರೆ ಐದೂವರೆ ಮೀಟರ್ ಉದ್ದ, 49 ಇಂಚು ಅಗಲ, 900 ಗ್ರಾಂ ತೂಕವಿದೆ. ಅ.17ರಂದು ನಡೆಯಲಿರುವ ವ್ಯಾಪಾರಿಯ ಮಗಳ ಮದುವೆಗಾಗಿ ಈ ಸೀರೆಯನ್ನು ತಯಾರಿಸಲಾಗಿದೆ. ಈ ಸೀರೆಯಲ್ಲಿ 200 ಗ್ರಾಂ ಚಿನ್ನವನ್ನು ಬಳಸಲಾಗಿದೆ. ಎಲ್ಲಾ ಸೇರಿ 18 ಲಕ್ಷ ರೂಪಾಯಿ ವೆಚ್ಚವಾಗಿದೆ. ಚಿನ್ನದಿಂದ ಸೀರೆಯನ್ನು ತಯಾರಿಸುತ್ತಿರುವುದು ಹೆಮ್ಮೆಯ ಸಂಗತಿ" ಎಂದು ವಿಜಯ್ ಕುಮಾರ್ ಖುಷಿ ಹಂಚಿಕೊಂಡರು.