ಪಾಮರ್ರು(ಆಂಧ್ರಪ್ರದೇಶ): ರಾಮೋಜಿ ರಾವ್ ನಿಧನದ ಸುದ್ದಿ ಕೇಳಿ ಅವರ ಹುಟ್ಟೂರು ಪೆದಪರುಪುಡಿಯಲ್ಲಿ ಶೋಕ ಮಡುಗಟ್ಟಿದೆ. ದುಃಖಿತರಾದ ಗ್ರಾಮಸ್ಥರು 'ಜೋಹರ್ ರಾಮೋಜಿ ರಾವ್' ಎಂದು ಘೋಷಣೆ ಮೊಳಗಿಸಿದರು. ರಾಮೋಜಿ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ ಅವರು ಗ್ರಾಮಕ್ಕೆ ನೀಡಿದ ಕೊಡುಗೆಗಳನ್ನು ಕೊಂಡಾಡಿದರು.
ರಾಮೋಜಿ ರಾವ್ ಗೆಳೆಯರಾದ ಪಲಡುಗು ಚಂದ್ರಶೇಖರ್, ಗ್ರಾಮಸ್ಥರಾದ ಗರಪತಿ ಬಾಬು ರಾವ್, ರತ್ನಪ್ರಸಾದ್ (ನಾಣಿ), ಕಣಗಲಾ ಪಾರ್ವತಿ, ನಾಗಬೋಯಿನ ಶ್ರೀನಿವಾಸರಾವ್, ಪಲಡುಗು ಸಂಧ್ಯಾರಾಣಿ, ಲಾವಣ್ಯ, ನಾಗಬೋಯಿನ ರಮಣ ಮತ್ತಿತರರು ಅಂತಿಮ ನಮನ ಸಲ್ಲಿಸಿದರು.
ರಾಮೋಜಿ ರಾವ್ ಹುಟ್ಟೂರಿ ಸೇವೆ: ರಾಮೋಜಿ ರಾವ್ ನಿಧನಕ್ಕೆ ಪಾಮರ್ರು ಶಾಸಕ ವರ್ಲ ಕುಮಾರ ರಾಜಾ ತೀವ್ರ ಸಂತಾಪ ವ್ಯಕ್ತಪಡಿಸಿದರು. ''ಸಾಮಾನ್ಯ ಕುಟುಂಬದಲ್ಲಿ ಹುಟ್ಟಿ ಅಸಾಧಾರಣ ಯಶಸ್ಸು ಗಳಿಸಿರುವ ರಾಮೋಜಿ ರಾವ್ ನಿಧನ ತೀವ್ರ ದುಃಖ ತಂದಿದೆ. ಅವರು ತೆಲುಗು ರಾಜ್ಯಗಳು ಸೇರಿದಂತೆ ದೇಶಕ್ಕೆ ಹಲವು ರೀತಿಯಲ್ಲಿ ಸೇವೆ ಸಲ್ಲಿಸಿದ್ದಾರೆ. ತೆಲುಗು ಜನರ ಜೀವನದಲ್ಲಿ ಅತ್ಯಂತ ಪ್ರಭಾವಶಾಲಿ ಗುರುತುಗಳನ್ನು ಬಿಟ್ಟು ಬಾರದ ಲೋಕಕ್ಕೆ ಪಯಣಿಸಿದ್ದಾರೆ. ತಮ್ಮ ಸ್ವಂತ ಹಣದಲ್ಲಿ ಪೆದಪರುಪುಡಿ ಗ್ರಾಮದ ಯುವಕರಿಗೆ ಉದ್ಯೋಗ ಕಲ್ಪಿಸುವ ನಿಟ್ಟಿನಲ್ಲಿ ಶ್ರಮಿಸಿದ್ದರು'' ಎಂದು ಕೊಂಡಾಡಿದರು.
ಅಂತ್ಯಕ್ರಿಯೆ: ರಾಮೋಜಿ ರಾವ್ ಪಾರ್ಥಿವ ಶರೀರದ ಅಂತಿಮ ಸಂಸ್ಕಾರದ ವಿಧಿವಿಧಾನಗಳು ಇಂದು ಬೆಳಗ್ಗೆ 9ಕ್ಕೆ ರಾಮೋಜಿ ಫಿಲಂ ಸಿಟಿಯಲ್ಲಿ ಆರಂಭವಾಗಿದ್ದು, ಇದೀಗ ಅಂತಿಮ ಯಾತ್ರೆ ನಡೆಯುತ್ತಿದೆ. ಅಂತ್ಯಕ್ರಿಯನ್ನು ಸಕಲ ಸರ್ಕಾರ ಗೌರವದೊಂದಿಗೆ ನೆರವೇರಿಸಲು ತೆಲಂಗಾಣ ಸರ್ಕಾರ ನಿರ್ಧರಿಸಿದೆ. ಈಗಾಗಲೇ ಅನೇಕ ಗಣ್ಯರು, ಸಾರ್ವಜನಿಕರು ಶ್ರದ್ಧಾಂಜಲಿ ಸಲ್ಲಿಸಿದ್ದಾರೆ.
ಇದನ್ನೂ ಓದಿ:LIVE: ಮಾಧ್ಯಮ ಲೋಕದ ದಿಗ್ಗಜ ರಾಮೋಜಿ ರಾವ್ ಅಂತ್ಯಕ್ರಿಯೆ - Ramoji Rao Funeral