ಏಲೂರು (ಆಂಧ್ರಪ್ರದೇಶ) :ವರ್ಷದ ಮೊದಲ ಮತ್ತು ರೈತರ ಹಬ್ಬವಾದ ಸಂಕ್ರಾಂತಿಯು ನವ ವಧು - ವರರಿಗೂ ಸುಗ್ಗಿ ತರುತ್ತದೆ. ಹೊಸ ಅಳಿಯ ಮೊದಲ ಬಾರಿಗೆ ಅತ್ತೆ- ಮಾವನ ಮನೆಗೆ ಬಂದಾಗ ತರಹೇವಾರಿ ಆಹಾರ ಪದಾರ್ಥ ಮಾಡಿ ಉಣಬಡಿಸುವುದು ಇದೇ ಹಬ್ಬದಲ್ಲಿ. ಆಂಧ್ರಪ್ರದೇಶದ ಕುಟುಂಬವೊಂದು ತಮ್ಮ ಅಳಿಯನಿಗಾಗಿ ಬರೋಬ್ಬರಿ 452 ಬಗೆಯ ಖಾದ್ಯಗಳನ್ನು ತಯಾರಿಸಿದೆ.
ಏಲೂರು ಜಿಲ್ಲೆಯ ಜಂಗಾರೆಡ್ಡಿಗುಡೆಂನ ವಂದನಾಪು ವೆಂಕಟೇಶ್ವರ ರಾವ್ ಅವರು ಕುಟುಂಬ ತನ್ನ ಅಳಿಯನಿಗೆ ಅದ್ಧೂರಿ ಸ್ವಾಗತ ಕೋರಿದೆ. ಮಾವನ ಮನೆಯ ಪ್ರೀತಿ ಕಂಡು ಅಳಿಯ ಅವಾಕ್ಕಾಗಿದ್ದಾನೆ. ವಿಧವಿಧದ ಖಾದ್ಯಗಳನ್ನು ಸವಿದಿದ್ದಾರೆ.
ಅಳಿಯನಿಗೆ ಭೂರಿ ಭೋಜನ:ಮೊದಲ ಸಂಕ್ರಾಂತಿ ಹಬ್ಬಕ್ಕೆ ಬಂದ ಹೊಸ ಅಳಿಯನಿಗೆ ಮಾವನ ಮನೆಯ ಕುಟುಂಬವು, ವಿಶೇಷ ಭೋಜನದ ಮೂಲಕ ಆಶ್ಚರ್ಯಚಕಿತಗೊಳಿಸಿದೆ. ವಿವಿಧ ಶಾಖಾಹಾರ, ಕುರುಕಲು ತಿಂಡಿ, ಸಿಹಿತಿಂಡಿಗಳು, ಹಣ್ಣುಗಳು, ಒಣ ಹಣ್ಣುಗಳು, ತಂಪು ಪಾನೀಯ ಸೇರಿದಂತೆ 452 ಬಗೆಯ ಖಾದ್ಯಗಳನ್ನು ಊಟದ ಟೇಬಲ್ ಮೇಲೆ ಮಟ್ಟಸವಾಗಿ ಜೋಡಿಸಿಡಲಾಗಿತ್ತು. ಅಳಿಯ ಮತ್ತು ಮಗಳನ್ನು ಭೋಜನಕ್ಕೆ ಕರೆದು ಆತಿಥ್ಯ ನೀಡಲಾಗಿದೆ.
ಅಚ್ಚರಿಗೊಂಡ ಅಳಿಯ:ಮಾವನ ಮನೆಯ ಅದ್ಧೂರಿ ಆತಿಥ್ಯ ಕಂಡು ಅಳಿಯ ಶಿವ ಭಾಸ್ಕರ್ ಅಚ್ಚರಿಪಟ್ಟಿದ್ದಾರೆ. ಈ ಮೆಗಾ ಡಿನ್ನರ್‌ನಲ್ಲಿನ ಖಾದ್ಯಗಳನ್ನು ನೋಡಿ ಕಣ್ಣಗಲಿಸಿದ್ದಾರೆ. ಇಷ್ಟೊಂದು ಪ್ರಮಾಣದಲ್ಲಿ ವಿಧವಿಧದ ಭೋಜನವನ್ನು ತಾನು ನಿರೀಕ್ಷಿಸಿರಲಿಲ್ಲ. ಅದರಲ್ಲೂ ಸಸ್ಯಾಹಾರದಲ್ಲಿ ಹಲವು ಬಗೆಯ ಪದಾರ್ಥಗಳು ಇರುವುದನ್ನು ಇಂದೇ ನೋಡಿದ್ದೇನೆ ಎಂದರು.