ನವದೆಹಲಿ:2024ರ ಲೋಕಸಭೆ ಚುನಾವಣೆಯ ಏಳನೇ ಹಾಗೂ ಅಂತಿಮ ಹಂತದ ಮತದಾನವು ಜೂನ್ 1ರಂದು ನಡೆಯಲಿದೆ. ಬಿಹಾರ, ಚಂಡೀಗಢ, ಹಿಮಾಚಲ ಪ್ರದೇಶ, ಜಾರ್ಖಂಡ್, ಒಡಿಶಾ, ಪಂಜಾಬ್, ಉತ್ತರ ಪ್ರದೇಶ ಮತ್ತು ಪಶ್ಚಿಮ ಬಂಗಾಳ ಸೇರಿದಂತೆ 7 ರಾಜ್ಯಗಳು, ಒಂದು ಕೇಂದ್ರಾಡಳಿತ ಪ್ರದೇಶಗಳ 57 ಲೋಕಸಭೆ ಕ್ಷೇತ್ರಗಳಿಗೆ ಮತದಾನ ಜರುಗಲಿದೆ. ಶುಕ್ರವಾರ ಸಂಜೆಯೇ ಚುನಾವಣಾ ಸಿಬ್ಬಂದಿ ಮತಯಂತ್ರಗಳ ಸಮೇತವಾಗಿ ತಮ್ಮ ಮತಗಟ್ಟೆಗಳತ್ತ ತೆರಳಿದ್ದಾರೆ.
ದೇಶಾದ್ಯಂತ 543 ಲೋಕಸಭಾ ಕ್ಷೇತ್ರಗಳಿಗೆ ಏಪ್ರಿಲ್ 19 ರಿಂದ ಚುನಾವಣಾ ಪ್ರಕ್ರಿಯೆ ಆರಂಭವಾಗಿದೆ. ಈಗಾಗಲೇ 6 ಹಂತಗಳಲ್ಲಿ 28 ರಾಜ್ಯಗಳು, ಕೇಂದ್ರಾಡಳಿತ ಪ್ರದೇಶಗಳ 486 ಲೋಕಸಭೆ ಕ್ಷೇತ್ರಗಳಿಗೆ ಚುನಾವಣಾ ಪೂರ್ಣಗೊಂಡಿದೆ. ಅಂತಿಮ ಹಂತದಲ್ಲಿ 57 ಕ್ಷೇತ್ರಗಳಿಗೆ ಮತದಾನ ನಡೆಯುತ್ತಿದೆ. ಇದರಲ್ಲಿ 41 ಸಾಮಾನ್ಯ, 13 ಎಸ್ಸಿ ಮೀಸಲು ಹಾಗೂ 13 3 ಎಸ್ಟಿ ಮೀಸಲು ಕ್ಷೇತ್ರಗಳಾಗಿವೆ. ಇದೇ ವೇಳೆ, ಒಡಿಶಾ ರಾಜ್ಯ ವಿಧಾನಸಭೆಯ ಉಳಿದ 42 ವಿಧಾನಸಭಾ ಕ್ಷೇತ್ರಗಳಿಗೂ ಏಕಕಾಲದಲ್ಲಿ ಮತದಾನ ಜರುಗಲಿದೆ. ಜೂನ್ 4ರಂದು ಮತ ಎಣಿಕೆ ನಡೆಯಲಿದೆ.
ಕಣದಲ್ಲಿರುವ ಪ್ರಮುಖರು: ಪಂಜಾಬ್‌ನ ಎಲ್ಲ 13 ಕ್ಷೇತ್ರಗಳು, ಹಿಮಾಚಲ ಪ್ರದೇಶದ 4 ಕ್ಷೇತ್ರಗಳು, ಉತ್ತರ ಪ್ರದೇಶದ 13 ಕ್ಷೇತ್ರಗಳು, ಪಶ್ಚಿಮ ಬಂಗಾಳದ 9 ಕ್ಷೇತ್ರಗಳು, ಬಿಹಾರದ 8 ಕ್ಷೇತ್ರಗಳು, ಒಡಿಶಾದ 6 ಕ್ಷೇತ್ರಗಳು ಮತ್ತು ಜಾರ್ಖಂಡ್‌ನ 3 ಕ್ಷೇತ್ರಗಳು ಹಾಗೂ ಚಂಡೀಗಢ ಲೋಕಸಭೆ ಕ್ಷೇತ್ರಕ್ಕೆ ಮತದಾನ ನಿಗದಿಯಾಗಿದೆ. ಈ 57 ಕ್ಷೇತ್ರಗಳ ಪೈಕಿ ಉತ್ತರ ಪ್ರದೇಶದ ವಾರಾಣಸಿ ಸಹ ಸೇರಿದೆ. ಒಟ್ಟಾರೆ 904 ಅಭ್ಯರ್ಥಿಗಳು ಅಖಾಡದಲ್ಲಿದ್ದಾರೆ.
ವಾರಾಣಸಿ ಕ್ಷೇತ್ರದಿಂದ ಪ್ರಧಾನಿ ನರೇಂದ್ರ ಮೋದಿ ಸತತ ಮೂರನೇ ಅವಧಿಗೆ ಸ್ಪರ್ಧಿಸಿದ್ದಾರೆ. ವಾರಾಣಸಿಯಲ್ಲಿ ಮೋದಿ ವಿರುದ್ಧ ಅಜಯ್ ರಾಯ್ (ಕಾಂಗ್ರೆಸ್), ಅಥರ್ ಜಮಾಲ್ ಲಾರಿ (ಬಿಎಸ್‌ಪಿ), ಕೋಲಿಸೆಟ್ಟಿ ಶಿವಕುಮಾರ್ (ಯುಗ ತುಳಸಿ ಪಕ್ಷ), ಗಗನ್ ಪ್ರಕಾಶ್ ಯಾದವ್, (ಅಪ್ನಾ ದಳ - ಕ್ಯಾಮೆರಾವಾಡಿ) ಮತ್ತು ಪಕ್ಷೇತರರಾಗಿ ದಿನೇಶ್ ಕುಮಾರ್ ಯಾದವ್ ಮತ್ತು ಸಂಜಯ್ ಕುಮಾರ್ ತಿವಾರಿ ಕಣದಲ್ಲಿದ್ದಾರೆ.
ಉಳಿದಂತೆ ಕೇಂದ್ರ ಸಚಿವ ಅನುರಾಗ್ ಠಾಕೂರ್, ಪಶ್ಚಿಮ ಬಂಗಾಳದ ಸಿಎಂ ಮಮತಾ ಬ್ಯಾನರ್ಜಿ ಅವರ ಸೋದರಳಿಯ ಅಭಿಷೇಕ್ ಬ್ಯಾನರ್ಜಿ, ಬಿಹಾರ ಮಾಜಿ ಸಿಎಂ ಲಾಲು ಪ್ರಸಾದ್ ಅವರ ಪುತ್ರಿ ಮಿಸಾ ಭಾರತಿ ಮತ್ತು ನಟಿ ಕಂಗನಾ ರಣಾವತ್, ಪಂಜಾಬ್ ಮಾಜಿ ಸಿಎಂ ಚರಂಜಿತ್ ಸಿಂಗ್ ಚನ್ನಿ, ಮೂರು ಬಾರಿ ಸಂಸದರಾಗಿರುವ ಹರ್‌ಸಿಮ್ರತ್ ಕೌರ್ ಬಾದಲ್ ಇತರ ಪ್ರಮುಖ ಅಭ್ಯರ್ಥಿಗಳಾಗಿದ್ದಾರೆ.