ಅಗರ್ತಲಾ: ತ್ರಿಪುರಾಕ್ಕೆ ಅಕ್ರಮವಾಗಿ ಪ್ರವೇಶಿಸಿದ್ದ ಏಳು ಬಾಂಗ್ಲಾದೇಶಿ ಪ್ರಜೆಗಳು ಮತ್ತು ಇಬ್ಬರು ರೋಹಿಂಗ್ಯಾಗಳನ್ನು ಗಡಿ ಭದ್ರತಾ ಪಡೆ (ಬಿಎಸ್ಎಫ್) ಮತ್ತು ಸರ್ಕಾರಿ ರೈಲ್ವೆ ಪೊಲೀಸರು (ಜಿಆರ್ಪಿ) ಬಂಧಿಸಿದ್ದಾರೆ ಎಂದು ಅಧಿಕಾರಿಗಳು ಶನಿವಾರ ತಿಳಿಸಿದ್ದಾರೆ. ತ್ರಿಪುರಾದ ಖೋವಾಯಿ ಜಿಲ್ಲೆಯ ರಂಗಿಚೆರಾ ಬಾರ್ಡರ್ ಔಟ್ ಪೋಸ್ಟ್ (ಬಿಒಪಿ) ಬಳಿ ಗಡಿ ಬೇಲಿ ದಾಟಿ ಭಾರತದೊಳಗೆ ಬರುತ್ತಿದ್ದ ಮಹಿಳೆ ಮತ್ತು ಹೆಣ್ಣು ಮಗು ಸೇರಿದಂತೆ ಮೂವರು ಬಾಂಗ್ಲಾದೇಶದ ಪ್ರಜೆಗಳನ್ನು ಗಡಿ ಕಾವಲು ಪಡೆಗಳು ಬಂಧಿಸಿವೆ ಎಂದು ಬಿಎಸ್ಎಫ್ ವಕ್ತಾರರು ತಿಳಿಸಿದ್ದಾರೆ.
ತಮ್ಮ ಇಬ್ಬರು ಸಹಚರರು ಈಗಾಗಲೇ ಗಡಿ ದಾಟಿ ಬಾಗಿಚೇರಾ ಗ್ರಾಮದ ಕಡೆಗೆ ತೆರಳಿದ್ದಾರೆ ಎಂದು ಬಂಧಿತ ನುಸುಳುಕೋರರು ಮಾಹಿತಿ ನೀಡಿದರು. ನಂತರ, ರಾಜ್ಯ ಪೊಲೀಸರ ಸಹಯೋಗದೊಂದಿಗೆ ಬಾಗಿಚೇರಾ ಗ್ರಾಮದಲ್ಲಿ ಕಾರ್ಯಾಚರಣೆ ನಡೆಸಿ ಇನ್ನೂ ಇಬ್ಬರು ಬಾಂಗ್ಲಾದೇಶ ಪ್ರಜೆಗಳು ಮತ್ತು ಬಾಂಗ್ಲಾದ ದಲ್ಲಾಳಿಯೊಬ್ಬನನ್ನು ಬಂಧಿಸಲಾಯಿತು.
ಬಂಧಿತ ಬಾಂಗ್ಲಾದೇಶಿ ಪ್ರಜೆಗಳೆಲ್ಲರೂ ಸಿಲ್ಹೆಟ್ ಜಿಲ್ಲೆಯ ಮೌಲ್ವಿಬಜಾರ್ ನಿವಾಸಿಗಳಾಗಿದ್ದು, ಒಂದೇ ಕುಟುಂಬದವರಾಗಿದ್ದಾರೆ. ತ್ರಿಪುರಾದ ಹಲಹಲ್ಲಿ ಎಂಬಲ್ಲಿ ಬಡಗಿಯಾಗಿ ಕೆಲಸ ಮಾಡುತ್ತಿದ್ದ ದಲ್ಲಾಳಿ ಕೂಡ ಬಾಂಗ್ಲಾದೇಶದ ಪ್ರಜೆಯಾಗಿದ್ದು, ಆತ ಕೂಡ ಮೌಲ್ವಿಬಜಾರ್ ನಿವಾಸಿ ಎಂದು ತಿಳಿದುಬಂದಿದೆ.
ಕಳ್ಳಸಾಗಣೆದಾರನ ಬಂಧನ: ಶುಕ್ರವಾರ ರಾತ್ರಿ ನಡೆಸಲಾದ ಮತ್ತೊಂದು ಕಾರ್ಯಾಚರಣೆಯಲ್ಲಿ ಪಶ್ಚಿಮ ತ್ರಿಪುರಾ ಜಿಲ್ಲೆಯ ಕಲ್ಕಾಲಿಯಾದಲ್ಲಿನ ಬಾರ್ಡರ್ ಔಟ್ಪೋಸ್ಟ್ ಬಳಿ 33 ಲಕ್ಷ ರೂ. ಮೌಲ್ಯದ ಇಂಪೋರ್ಟೆಡ್ ಸಿಗರೇಟುಗಳನ್ನು ಭಾರತದೊಳಗೆ ಸಾಗಿಸಲು ಯತ್ನಿಸುತ್ತಿದ್ದ ಬಾಂಗ್ಲಾದೇಶದ ಕಳ್ಳಸಾಗಣೆದಾರನೊಬ್ಬನ್ನು ಬಿಎಸ್ಎಫ್ ಬಂಧಿಸಿದೆ. ಮತ್ತೊಂದು ಸಂಬಂಧಿತ ಘಟನೆಯಲ್ಲಿ, ಜಿಆರ್ಪಿ ಸಿಬ್ಬಂದಿ ಶುಕ್ರವಾರ ರಾತ್ರಿ ಅಗರ್ತಲಾ ರೈಲ್ವೆ ನಿಲ್ದಾಣದಿಂದ ಮಹಿಳೆ ಸೇರಿದಂತೆ ಇಬ್ಬರು ರೋಹಿಂಗ್ಯಾಗಳನ್ನು ಬಂಧಿಸಿದ್ದಾರೆ.
2017 ರಿಂದ ಮ್ಯಾನ್ಮಾರ್ನಿಂದ ಪಲಾಯನ ಮಾಡಿದ ಒಂದು ದಶಲಕ್ಷಕ್ಕೂ ಹೆಚ್ಚು ರೋಹಿಂಗ್ಯಾಗಳು ಬಾಂಗ್ಲಾದೇಶದ ಕಾಕ್ಸ್ ಬಜಾರ್ನಲ್ಲಿರುವ ಶಿಬಿರಗಳಲ್ಲಿ ವಾಸಿಸುತ್ತಿದ್ದಾರೆ. ಅಲ್ಲಿಂದ ತಪ್ಪಿಸಿಕೊಂಡು ಇವರು ಅಕ್ರಮವಾಗಿ ಭಾರತಕ್ಕೆ ಪ್ರವೇಶಿಸುತ್ತಿದ್ದಾರೆ.
ಅಕ್ರಮವಾಗಿ ಪ್ರವೇಶಿಸಿದ 310 ಬಾಂಗ್ಲಾದೇಶೀಯರ ಬಂಧನ: ಕಳೆದ ಮೂರು ತಿಂಗಳಲ್ಲಿ, ಅಕ್ರಮವಾಗಿ ಭಾರತದೊಳಗೆ ಪ್ರವೇಶಿಸಿದ್ದಕ್ಕಾಗಿ 310 ಕ್ಕೂ ಹೆಚ್ಚು ಬಾಂಗ್ಲಾದೇಶಿ ಪ್ರಜೆಗಳು ಮತ್ತು 34 ರೋಹಿಂಗ್ಯಾಗಳನ್ನು ಜಿಆರ್ಪಿ, ಗಡಿ ಭದ್ರತಾ ಪಡೆ ಮತ್ತು ತ್ರಿಪುರಾ ಪೊಲೀಸರು ಅಗರ್ತಲಾ ರೈಲ್ವೆ ನಿಲ್ದಾಣ ಮತ್ತು ರಾಜ್ಯದ ಇತರ ಸ್ಥಳಗಳಿಂದ ಬಂಧಿಸಿದ್ದಾರೆ.
ಇದನ್ನೂ ಓದಿ: ಹಿಂಸಾಚಾರ ಪೀಡಿತ ಮಣಿಪುರದಲ್ಲಿ ಪ್ರತ್ಯೇಕ ಸರ್ಕಾರ; ಸಿಎಂ ವಿರುದ್ಧ ಕುಕಿ ಸಮುದಾಯ ಹೋರಾಟ - Kuki community protests