ಮಯೂರ್‌ಭಂಜ್ ( ಒಡಿಶಾ):ನಾಟಕ ತಂಡ ಪ್ರಯಾಣಿಸುತ್ತಿದ್ದ ಟ್ರಕ್ ಪಲ್ಟಿಯಾಗಿ ಆರು ಜನರು ಮೃತಪಟ್ಟು, 11 ಮಂದಿ ಗಾಯಗೊಂಡಿರುವ ಘಟನೆ ಇಂದು ಬೆಳಗ್ಗೆ ರಾಷ್ಟ್ರೀಯ ಹೆದ್ದಾರಿ 49ರ ಧರ್ಸುನಿ ಘಾಟ್ನಲ್ಲಿ ನಡೆದಿದೆ. ಗಾಯಾಳುಗಳನ್ನು ಪಿಆರ್‌ಎಂ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ದಾಖಲಿಸಲಾಗಿದೆ. ಚಾಲಕ ಸ್ಥಳದಿಂದ ಪರಾರಿಯಾಗಿದ್ದಾನೆ ಎಂದು ತಿಳಿದು ಬಂದಿದೆ.
ಪೊಲೀಸರ ಮಾಹಿತಿಯ ಪ್ರಕಾರ, ಟ್ರಕ್ ರಾಯರಂಗಪುರದಿಂದ ಜಲೇಶ್ವರಕ್ಕೆ (ಬಾಲಸೋರ್ ಜಿಲ್ಲೆ) ತೆರಳುತ್ತಿತ್ತು. ಬೆಳಗ್ಗೆ 11 ಗಂಟೆ ಸುಮಾರಿಗೆ ಟ್ರಕ್ ಧರ್ಸುನಿ ಘಾಟ್ ರಸ್ತೆಯಲ್ಲಿ ಸಂಚರಿಸುತ್ತಿದ್ದಾಗ ಕೊನೆಯ ತಿರುವಿನಲ್ಲಿ ಟ್ರಕ್ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ. ಪರಿಣಾಮ ಟ್ರಕ್ನಲ್ಲಿದ್ದವರು 20 ಅಡಿ ಆಳದ ಕಂದಕಕ್ಕೆ ಉರುಳಿ ಬಿದ್ದಿದ್ದಾರೆ. ಇನ್ನು ಟ್ರಕ್ನಲ್ಲಿ ಧೌಲಿ ಗಣನಾಟ್ಯ ನಾಟಕ ತಂಡದ 15ಕ್ಕೂ ಹೆಚ್ಚು ಸದಸ್ಯರು ಪ್ರಯಾಣಿಸುತ್ತಿದ್ದರು ಎಂದು ಹೇಳಿದ್ದಾರೆ.
ತಕ್ಷಣ ಘಟನಾ ಸ್ಥಳಕ್ಕೆ ಬಂಗಿರಿಪೋಶಿ ಪೊಲೀಸರು ಮತ್ತು ಅಗ್ನಿಶಾಮಕ ಸಿಬ್ಬಂದಿ ಧಾವಿಸಿ ಸ್ಥಳೀಯರ ನೆರವಿನಿಂದ ಪ್ರಯಾಣಿಕರನ್ನು ರಕ್ಷಿಸಿದ್ದಾರೆ. ಈ ಅಪಘಾತದಲ್ಲಿ 6 ಮಂದಿ ಸಾವನ್ನಪ್ಪಿದ್ದಾರೆ. 11 ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಅವರನ್ನು ಚಿಕಿತ್ಸೆಗೆ ಆಸ್ಪತ್ರೆಗೆ ದಾಖಲಿಸಲಾಗಿದೆ. ಮಕರ ಸಂಕ್ರಾಂತಿ ಮತ್ತು ತುಸು ಹಬ್ಬ (ಆದಿವಾಸಿಗಳ ಹಬ್ಬ) ನಿಮಿತ್ತ ಮಯೂರಭಂಜ್‌ನ ರಾಯರಂಗಪುರದ ಬಲ್ಡಾ ಬ್ಲಾಕ್, ಬಾಸಿಂಗಿ ಗ್ರಾಮದಲ್ಲಿ ‘ಧೌಲಿ ಗಣನಾಟ್ಯ’ ನಾಟಕ ನಡೆಸಿ, ಇಂದು ವಾಪಸ್ ಆಗುವಾಗ ಈ ಅಪಘಾತ ಸಂಭವಿಸಿದೆ ಎಂದು ತಿಳಿಸಿದ್ದಾರೆ.