ಧಾರಾಶಿವ (ಮಹಾರಾಷ್ಟ್ರ):ವಿಷಯುಕ್ತ ಆಹಾರ ಸೇವಿಸಿ 35 ಜನರು ಅಸ್ವಸ್ಥಗೊಂಡಿರುವ ಘಟನೆ ಧಾರಾಶಿವ ತಾಲೂಕಿನ ಪರ್ತಾಪುರ ಗ್ರಾಮದಲ್ಲಿ ನಡೆದಿದೆ. ಗ್ರಾಮದ ಸ್ವಾತಿ ತಾನಾಜಿ ಗಾಯಕವಾಡ ಎಂಬುವರ ಮನೆಯಲ್ಲಿ ಕಾರ್ಯಕ್ರಮವೊಂದನ್ನು ಆಯೋಜಿಸಲಾಗಿತ್ತು. ಅತಿಥಿಗಳಿಗಳಿಗಾಗಿ ಮಹಾರಾಷ್ಟ್ರದ ವಿಶೇಷ ಖಾದ್ಯ ಪುರನ್ ಪೋಲಿ (ಪೊಂಗಲ್) ತಯಾರಿಸಲಾಗಿತ್ತು. ಈ ಆಹಾರ ಸೇವಿಸಿದ 35 ಜನರಲ್ಲಿ ಇದ್ದಕ್ಕಿದ್ದಂತೆ ಆರೋಗ್ಯದಲ್ಲಿ ಏರುಪೇರು ಕಾಣಿಸಿಕೊಂಡಿತ್ತು. ಅಸ್ವಸ್ಥಗೊಂಡವರಲ್ಲಿ ಹೆಚ್ಚಿನವರು ಮಹಿಳೆಯರೇ ಇದ್ದು, ಇಬ್ಬರು ಮಕ್ಕಳು ಮತ್ತು ಇಬ್ಬರು ಪುರುಷರು ಸೇರಿದ್ದಾರೆ. ಎಲ್ಲರನ್ನೂ ಧಾರಾಶಿವ ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ವಾಂತಿ-ಭೇದಿ:ಭಾನುವಾರ ಸಂಜೆ ಸ್ವಾತಿ ತಾನಾಜಿ ಗಾಯಕವಾಡ ಅವರ ಮನೆಯಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು. ಗ್ರಾಮದ ಮಹಿಳೆಯರು ಹಾಗೂ ಅಕ್ಕಪಕ್ಕದ ಗ್ರಾಮಸ್ಥರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಈ ವೇಳೆ, ಪುರನ್ ಪೋಲಿ ಸೇವಿಸಿದ ಅತಿಥಿಗಳಲ್ಲಿ ಸುಮಾರು 20 ಗಂಟೆಗಳ ನಂತರ ವಾಂತಿ - ಭೇದಿ ಕಾಣಿಸಿಕೊಂಡಿದೆ. ಒಬ್ಬರ ಬಳಿಕ ಮತ್ತೊಬ್ಬರಂತೆ ಸುಮಾರು 35 ಜನರಲ್ಲಿ ಆರೋಗ್ಯದ ಏರುಪೇರು ಕಾಣಿಸಿಕೊಂಡಿದೆ. ತಕ್ಷಣ ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಸದ್ಯ ಎಲ್ಲರ ಆರೋಗ್ಯ ಸ್ಥಿರವಾಗಿದೆ ಎಂದು ಧಾರಾಶಿವ ಜಿಲ್ಲಾ ಸರ್ಕಾರಿ ಆಸ್ಪತ್ರೆಯ ವೈದ್ಯಾಧಿಕಾರಿ ಪ್ರಶಾಂತ್ ರೇವಾಡ್ಕರ್ ಈ ಬಗ್ಗೆ ಮಾಹಿತಿ ನೀಡಿದ್ದಾರೆ.