ಕರ್ನಾಟಕ

karnataka

ETV Bharat / bharat

34 ವರ್ಷದ ಹಳೇ ಕೇಸಲ್ಲಿ 90ರ ವೃದ್ಧ ಅರೆಸ್ಟ್; ಆಂಬ್ಯುಲೆನ್ಸ್​ನಲ್ಲಿ ಕರೆತಂದು ಕೋರ್ಟ್​ಗೆ ಹಾಜರುಪಡಿಸಿದ ಪೊಲೀಸರು!

ಕೋರ್ಟ್​ನಲ್ಲಿ ಬಾಕಿ ಉಳಿದಿರುವ ಹಳೆಯ ಕೇಸ್​ ಇತ್ಯರ್ಥಪಡಿಸಲು ಪೊಲೀಸರು 90 ವರ್ಷದ ವೃದ್ಧ ಆರೋಪಿಯನ್ನು ಬಂಧಿಸಿ ಕರೆದೊಯ್ದ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.

90ರ ವೃದ್ಧ ಆರೋಪಿ ಬಂಧಿಸಿ ಆಂಬ್ಯುಲೆನ್ಸ್​ನಲ್ಲಿ ಕೋರ್ಟ್​ಗೆ ಹಾಜರು
ವೃದ್ಧ ಆರೋಪಿಯನ್ನು ಬಂಧಿಸಿ ಆಂಬ್ಯುಲೆನ್ಸ್​ನಲ್ಲಿ ಕೋರ್ಟ್​ಗೆ ಹಾಜರಿಸಿದ ಪೊಲೀಸರು (ETV Bharat)

By ETV Bharat Karnataka Team

Published : 5 hours ago

ಚಂದೌಲಿ(ಉತ್ತರ ಪ್ರದೇಶ):ನೆರೆಮನೆಯವರ ನಡುವೆ ಜಗಳವಾಗಿ 34 ವರ್ಷದ ಹಿಂದೆ ದಾಖಲಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು 90 ವರ್ಷದ ಆರೋಪಿಯನ್ನು ಬಂಧಿಸಿದ್ದಾರೆ. ನಡೆಯಲೂ ಸಾಧ್ಯವಾಗದ ವೃದ್ಧನನ್ನು ಆಂಬ್ಯುಲೆನ್ಸ್​ನಲ್ಲಿ ಕರೆದೊಯ್ದು ಕೋರ್ಟ್​ ಮುಂದೆ ಹಾಜರುಪಡಿಸಿದ್ದಾರೆ. ಆರೋಪಿಯ ಪರಿಸ್ಥಿತಿ ಕಂಡು ನ್ಯಾಯಾಧೀಶರು ತಕ್ಷಣಕ್ಕೆ ಜಾಮೀನು ಮಂಜೂರು ಮಾಡಿದ್ದಾರೆ.

ಈ ಘಟನೆ ನಡೆದಿದ್ದು ಉತ್ತರ ಪ್ರದೇಶದ ಚಂದೌಲಿ ಜಿಲ್ಲೆಯಲ್ಲಿ. ಹಳೆಯ ಪ್ರಕರಣವನ್ನು ಇತ್ಯರ್ಥ ಮಾಡುವ ಸಲುವಾಗಿ ಕೋರ್ಟ್​, ಆರೋಪಿಯನ್ನು ಬಂಧಿಸಿ ತರುವಂತೆ ಪೊಲೀಸರಿಗೆ ಸೂಚಿಸಿತ್ತು. ಆದರೆ, ಆರೋಪಿಯನ್ನು ಕಂಡು ಕೋರ್ಟು ಜಾಮೀನು ನೀಡಿ ಕಳುಹಿಸಿ, ಪ್ರಕರಣವನ್ನು ರದ್ದುಗೊಳಿಸಿತು.

ನಡೆದಿದ್ದಿಷ್ಟು:ಜಿಲ್ಲೆಯ ಅಮರಸಿಪುರ ಗ್ರಾಮದ ನಿವಾಸಿಯಾದ ವೃದ್ಧ ಆರೋಪಿ ಕೇದಾರ ಮಲ್ಲಾ ಮತ್ತು ನೆರೆಮನೆಯವರ ನಡುವೆ ಯಾವುದೋ ವಿಷಯಕ್ಕಾಗಿ 1990ರಲ್ಲಿ ಜಗಳವಾಗಿತ್ತು. ನೆರೆಮನೆಯವರು ಶಹಬ್‌ಗಂಜ್ ಪೊಲೀಸ್ ಠಾಣೆಯಲ್ಲಿ ನಿಂದನೆ ಮತ್ತು ಹಲ್ಲೆ ದೂರು ನೀಡಿದ್ದರು. ಪೊಲೀಸರು ವಿವಿಧ ಐಪಿಸಿ ಸೆಕ್ಷನ್​ಗಳಡಿ ಪ್ರಕರಣ ದಾಖಲಿಸಿದ್ದರು.

ತನಿಖೆಯ ಬಳಿಕ ಪೊಲೀಸರು ಆರೋಪಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದರು. ಆರಂಭದಲ್ಲಿ ಕೇದಾರ್ ಮಲ್ಲಾ ಮತ್ತು ದೂರುದಾರರು ಕೋರ್ಟ್​ಗೆ ಹಾಜರಾಗಿದ್ದಾರೆ. ತದನಂತರ ಇಬ್ಬರೂ ಕೋರ್ಟ್‌ಗೆ ಬರುವುದನ್ನು ನಿಲ್ಲಿಸಿದ್ದಾರೆ. ದೂರುದಾರರು ಕೂಡ ವಕಾಲತ್ತು ಸ್ಥಗಿತಗೊಳಿಸಿದ್ದರು.

ಈ ಮಧ್ಯೆ, ನ್ಯಾಯಾಲಯಗಳಲ್ಲಿ ಬಾಕಿ ಉಳಿದಿರುವ ಎಲ್ಲಾ ಪ್ರಕರಣಗಳನ್ನು ಶೀಘ್ರವೇ ಇತ್ಯರ್ಥಗೊಳಿಸಲು ಸುಪ್ರೀಂ ಕೋರ್ಟ್ ಆದೇಶಿಸಿದೆ. ಹೀಗಾಗಿ, ಬಾಕಿ ಉಳಿದು ಧೂಳು ಹಿಡಿದಿದ್ದ ಈ ಪ್ರಕರಣದ ಕಡತಗಳು ಹೊರಬಿದ್ದಿವೆ. ಪ್ರಕರಣದ ವಿಚಾರಣೆಯೂ ಮರು ಆರಂಭಗೊಂಡಿದೆ. ಆರೋಪಿತ ಕೇದಾರ್ ಮಲ್ಲಾಗೆ ಈ ವಿಚಾರ ತಿಳಿದಿಲ್ಲ. ಆರೋಪಿಗಳು ನಿಗದಿತ ದಿನಾಂಕಕ್ಕೆ ಪದೇ ಪದೇ ಗೈರಾದ ಕಾರಣ, ನ್ಯಾಯಾಧೀಶರು ಸಿಟ್ಟಿಗೆದ್ದು, ಆರೋಪಿಯನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸುವಂತೆ ಪೊಲೀಸರಿಗೆ ಆದೇಶಿಸಿದ್ದರು.

ನ್ಯಾಯಾಲಯದ ಆದೇಶದ ಕಾರಣ, ಪೊಲೀಸರು 90 ವರ್ಷದ ಆರೋಪಿಯನ್ನು ಆಂಬ್ಯುಲೆನ್ಸ್​ ಮೂಲಕ ಕೋರ್ಟ್​ಗೆ ಹಾಜರುಪಡಿಸಿದ್ದಾರೆ. ವೃದ್ಧನ ಸ್ಥಿತಿ ನೋಡಿದ ನ್ಯಾಯಾಧೀಶರು ಕೂಡಲೇ ಜಾಮೀನು ಮಂಜೂರು ಮಾಡಿದರು. ಬಳಿಕ ವೃದ್ಧನನ್ನು ಆರೋಗ್ಯ ಕೇಂದ್ರಕ್ಕೆ ದಾಖಲಿಸಲಾಯಿತು.

ಇದನ್ನೂ ಓದಿ:ಗ್ಯಾಂಗ್​​ಸ್ಟರ್​​ ಲಾರೆನ್ಸ್​ ಬಿಷ್ಣೋಯಿ ಹತ್ಯೆಗೆ ₹1,11,11,111 ಬಹುಮಾನ ಘೋಷಿಸಿದ ಕರ್ಣಿ ಸೇನೆ

ABOUT THE AUTHOR

...view details