ಬೊಕಾಖಾಟ್(ಅಸ್ಸಾಂ):ಅಸ್ಸಾಂನ ಕಾಜಿರಂಗ ರಾಷ್ಟ್ರೀಯ ಉದ್ಯಾನದಲ್ಲಿ ಈ ವರ್ಷದ ಮೊದಲ ಪ್ರವಾಹಕ್ಕೆ 10 ಘೇಂಡಾಮೃಗಗಳು ಸೇರಿದಂತೆ 212 ವನ್ಯಜೀವಿಗಳು ಸಾವನ್ನಪ್ಪಿವೆ. ಉದ್ಯಾನದಲ್ಲಿ ಪ್ರವಾಹದ ಅಧಿಕವಾಗಿದ್ದರಿಂದ ಅನೇಕ ಪ್ರಾಣಿಗಳು ಮೃತಪಟ್ಟಿವೆ.
ಉದ್ಯಾನದ ಪ್ರಸ್ತುತ ಪರಿಸ್ಥಿತಿ ಕುರಿತು ಕಾಜಿರಂಗ ರಾಷ್ಟ್ರೀಯ ಉದ್ಯಾನ ಮತ್ತು ಹುಲಿ ಸಂರಕ್ಷಿತ ಪ್ರದೇಶದ ಫೀಲ್ಡ್ ಡೈರೆಕ್ಟರ್ ಡಾ. ಸೋನಾಲಿ ಘೋಸ್ ಮಾಹಿತಿ ನೀಡಿದ್ದಾರೆ. ಅವರ ಮಾಹಿತಿ ಪ್ರಕಾರ 'ಕಾಜಿರಂಗ ಉದ್ಯಾನ ಮತ್ತು ಹುಲಿ ಸಂರಕ್ಷಿತ ಪ್ರದೇಶದ 233 ಅರಣ್ಯ ಶಿಬಿರಗಳಲ್ಲಿ ಒಟ್ಟು 26 ಕ್ಯಾಂಪ್ಸ್ಗಳು ಇನ್ನೂ ಪ್ರವಾಹದ ನೀರಿನಲ್ಲಿವೆ. ಅಗರತೋಲಿಯ 34 ಕ್ಯಾಂಪ್‌ಗಳಲ್ಲಿ ಎರಡು ಜಲಾವೃತವಾಗಿದ್ದರೆ, ಕಾಜಿರಂಗದಲ್ಲಿನ 58 ಶಿಬಿರಗಳ ಪೈಕಿ 15 ಮತ್ತು ಬಗ್ರಿಯಲ್ಲಿನ 39 ಶಿಬಿರಗಳ ಪೈಕಿ 9 ಶಿಬಿರಗಳು ಪ್ರವಾಹದಲ್ಲಿ ಸಿಲುಕಿವೆ. ಈ ಪ್ರದೇಶಗಳಲ್ಲಿ ಐದು ಅಡಿಗಿಂತ ಹೆಚ್ಚು ನೀರು ಸಂಗ್ರಹವಾಗಿದೆ. ನಿಧಾನವಾಗಿ ಪ್ರವಾಹ ಇಳಿಮುಖವಾಗುತ್ತಿರುವುದರಿಂದ ಅರಣ್ಯ ಸಿಬ್ಬಂದಿ ಈಗಾಗಲೇ ತಮ್ಮ ಶಿಬಿರಗಳಿಗೆ ಮರಳಿದ್ದಾರೆ'.
ಭೀಕರ ಪ್ರವಾಹದಿಂದಾಗಿ ವಿವಿಧ ಪ್ರಭೇದದ ವನ್ಯಜೀವಿಗಳು ಉದ್ಯಾನದ ಒಳಗಿನ ಎತ್ತರದ ಪ್ರದೇಶಗಳಲ್ಲಿ ಆಶ್ರಯ ಪಡೆಯುತ್ತಿವೆ. ಆದರೆ, ಇನ್ನೂ ಕೆಲವು ಪ್ರಾಣಿಗಳು ಆಹಾರ ಮತ್ತು ನೆಲೆಗಾಗಿ ಉದ್ಯಾನ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಮತ್ತು ದಕ್ಷಿಣ ಕರ್ಬಿ ಬೆಟ್ಟಗಳಲ್ಲಿ ಆಶ್ರಯ ಪಡೆದಿವೆ. ಪ್ರವಾಹದ ಮಧ್ಯೆಯೂ ಅರಣ್ಯ ಇಲಾಖೆ ಜತೆಗೆ ಸ್ಥಳೀಯರು, ರಕ್ಷಣಾ ಸಂಸ್ಥೆಗಳು ವನ್ಯಜೀವಿಗಳನ್ನು ರಕ್ಷಿಸುತ್ತಿದ್ದಾರೆ. ಇನ್ನು ಉದ್ಯಾನದ ದಕ್ಷಿಣಕ್ಕೆ ರಾಷ್ಟ್ರೀಯ ಹೆದ್ದಾರಿ-37 ಅನ್ನು ದಾಟುವಾಗ ಪ್ರವಾಹದಲ್ಲಿ ಸಿಕ್ಕಿ ಅಥವಾ ಗಾಯಗೊಂಡ ಅನೇಕ ಪ್ರಾಣಿಗಳು ಪತ್ತೆಯಾಗುತ್ತಿವೆ.