ನವದೆಹಲಿ:ಮುಂದಿನ 5 ವರ್ಷಗಳಲ್ಲಿ ಪ್ರಧಾನ ಮಂತ್ರಿ ಆವಾಸ್ ಯೋಜನೆಯಡಿ ಗ್ರಾಮೀಣ ಭಾಗದ ಜನರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಹೆಚ್ಚುವರಿಯಾಗಿ 2 ಕೋಟಿ ಮನೆಗಳ ನಿರ್ಮಾಣವನ್ನು ಮಾಡಲಾಗುತ್ತದೆ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಗುರುವಾರ ಘೋಷಿಸಿದರು.
ಲೋಕಸಭೆಯಲ್ಲಿ 2024-25 ರ ಮಧ್ಯಂತರ ಬಜೆಟ್ ಅನ್ನು ಮಂಡಿಸಿದ ಅವರು, ಕೋವಿಡ್ -19 ಸಾಂಕ್ರಾಮಿಕದ ಹೊರತಾಗಿಯೂ ಪ್ರಧಾನ ಮಂತ್ರಿ ಆವಾಸ್ ಯೋಜನೆ (ಪಿಎಂಎವೈ) ಅನುಷ್ಠಾನವನ್ನು ಮುಂದುವರೆಸಲಾಗಿದೆ. ಈಗಾಗಲೇ ಘೋಷಿಸಿದಂತೆ ದೇಶದ ಗ್ರಾಮೀಣ ಭಾಗದಲ್ಲಿ 3 ಕೋಟಿ ಮನೆಗಳನ್ನು ನಿರ್ಮಿಸಲಾಗುತ್ತಿದೆ. ಈ ಗುರಿಯನ್ನು ಶೀಘ್ರದಲ್ಲೇ ತಲುಪಲಿದ್ದೇವೆ ಎಂದು ಹೇಳಿದರು.
3 ಕೋಟಿ ಮನೆ ನಿರ್ಮಾಣ ಸದ್ಯದಲ್ಲೇ ಪೂರ್ಣ:ಕೊರೊನಾ ಕಾರಣದಿಂದಾಗಿ ಆರ್ಥಿಕತೆ ಮೇಲೆ ಪೆಟ್ಟು ಬಿದ್ದರೂ, ಸವಾಲುಗಳನ್ನು ಎದುರಿಸಿ ಪ್ರಧಾನ ಮಂತ್ರಿ ಆವಾಸ್ ಯೋಜನೆಯನ್ನು ಕೇಂದ್ರ ಸರ್ಕಾರ ಮುಂದುವರಿಸಿದೆ. ಯೋಜಿಸಿದಂತೆ 3 ಕೋಟಿ ಮನೆಗಳ ನಿರ್ಮಾಣ ಗುರಿಯನ್ನು ಸದ್ಯದಲ್ಲೇ ಮುಟ್ಟಲಿದ್ದೇವೆ. ಬಳಿಕ ಇನ್ನೂ ಹೆಚ್ಚುವರಿ ಮನೆಗಳನ್ನು ನಿರ್ಮಾಣ ಮಾಡಲಾಗುವುದು ಎಂದು ಬಜೆಟ್‌ನಲ್ಲಿ ಘೋಷಿಸಿದರು.