ಪಾಟ್ನಾ(ಬಿಹಾರ): ಪ್ರಧಾನಿ ನರೇಂದ್ರ ಮೋದಿ ಅವರು ಸೋಮವಾರ ಪಿಎಂ ಕಿಸಾನ್ ಸಮ್ಮಾನ್ ನಿಧಿಯ (ಪಿಎಂ-ಕಿಸಾನ್) 19ನೇ ಕಂತನ್ನು ಕೋಟ್ಯಂತರ ರೈತರ ಖಾತೆಗಳಿಗೆ ಬಿಹಾರದ ಭಾಗಲ್ಪುರ ಜಿಲ್ಲೆಯಿಂದ ವರ್ಗಾಯಿಸಿದರು. ನೇರ ಲಾಭ ವರ್ಗಾವಣೆ (ಡಿಬಿಟಿ) ಮೂಲಕ 2.41 ಕೋಟಿ ಮಹಿಳಾ ರೈತರು ಸೇರಿದಂತೆ 9.8 ಕೋಟಿ ರೈತರ ಖಾತೆಗಳಿಗೆ ಇಂದು 22,000 ಕೋಟಿ ರೂ. ಜಮೆ ಆಗಿದೆ.
ಪಿಎಂ-ಕಿಸಾನ್‌ನ ಈ ಹಿಂದಿನ 18 ನೇ ಕಂತನ್ನು ಪ್ರಧಾನಿಯವರು ಅಕ್ಟೋಬರ್ 2024 ರಲ್ಲಿ ಮಹಾರಾಷ್ಟ್ರದ ವಾಶಿಮ್ನಿಂದ ವಿತರಿಸಿದ್ದರು. ಆಗ ದೇಶಾದ್ಯಂತದ 9.4 ಕೋಟಿ ರೈತರ ಖಾತೆಗಳಿಗೆ ಸುಮಾರು 20,000 ಕೋಟಿ ರೂ.ಗಿಂತ ಹೆಚ್ಚಿನ ಮೊತ್ತವನ್ನು ವರ್ಗಾವಣೆ ಮಾಡಲಾಗಿತ್ತು.
ಫೆಬ್ರವರಿ 2025 ರಲ್ಲಿ ಪ್ರಾರಂಭವಾದಾಗಿನಿಂದ ಈ ಯೋಜನೆಯಡಿ ಪ್ರಧಾನಿ ಮೋದಿ ನೇತೃತ್ವದ ಸರ್ಕಾರವು 18 ಕಂತುಗಳಲ್ಲಿ 3.46 ಲಕ್ಷ ಕೋಟಿ ರೂ.ಗಳನ್ನು ವಿತರಿಸಿದೆ.
ಇದಕ್ಕೂ ಮುನ್ನ, ಈ ಬಗ್ಗೆ ಸಾಮಾಜಿಕ ಜಾಲತಾಣ ಎಕ್ಸ್ನಲ್ಲಿ ಪೋಸ್ಟ್ ಮಾಡಿದ ಪಿಎಂ ಮೋದಿ, ರೈತರ ಕಲ್ಯಾಣದ ಬಗ್ಗೆ ಸರ್ಕಾರದ ಬದ್ಧತೆಯನ್ನು ಪುನರುಚ್ಚರಿಸಿದ್ದರು ಮತ್ತು ಅನ್ನದಾತರ ಬಗ್ಗೆ ಸರ್ಕಾರ ಹೆಮ್ಮೆಪಡುತ್ತದೆ ಎಂದು ಹೇಳಿದ್ದರು.