ನವದೆಹಲಿ:ಇತ್ತೀಚೆಗೆ ಮುಕ್ತಾಯವಾದ 18 ನೇ ಲೋಕಸಭಾ ಚುನಾವಣೆಯಲ್ಲಿ ಜಯಶಾಲಿಯಾದ ಒಟ್ಟು 543 ಅಭ್ಯರ್ಥಿಗಳ ಪೈಕಿ ಕೇವಲ ಶೇ 14 ರಷ್ಟು ಅಂದರೆ 74 ಮಹಿಳೆಯರು ಸಂಸದರಾಗಿ ಆಯ್ಕೆಯಾಗಿದ್ದಾರೆ. ಇನ್ನು ಈ 543 ಹೊಸ ಸಂಸದರ ಪೈಕಿ 251 (ಶೇ 46) ಜನರ ವಿರುದ್ಧ ಕ್ರಿಮಿನಲ್ ಪ್ರಕರಣಗಳು ದಾಖಲಾಗಿದ್ದು, 504 (ಶೇ 93) ಸಂಸದರು ಕೋಟ್ಯಧಿಪತಿಗಳಾಗಿದ್ದಾರೆ.
ಕ್ರಿಮಿನಲ್ ಪ್ರಕರಣ ಹೊಂದಿದ ಸಂಸದರ ಮಾಹಿತಿ:
ಅಸೋಸಿಯೇಷನ್ ಆಫ್ ಡೆಮಾಕ್ರಟಿಕ್ ರಿಫಾರ್ಮ್ಸ್ (ಎಡಿಆರ್) ನ ಇತ್ತೀಚಿನ ವರದಿಯ ಪ್ರಕಾರ, 2024 ರ ಲೋಕಸಭಾ ಚುನಾವಣೆಯಲ್ಲಿ ವಿಜೇತ 543 ಅಭ್ಯರ್ಥಿಗಳಲ್ಲಿ, 251 (46%) ವಿಜೇತ ಅಭ್ಯರ್ಥಿಗಳು ತಮ್ಮ ವಿರುದ್ಧ ಕ್ರಿಮಿನಲ್ ಪ್ರಕರಣಗಳಿರುವುದಾಗಿ ಘೋಷಿಸಿದ್ದಾರೆ. ಈ ಚುನಾವಣೆಯಲ್ಲಿ ಗೆದ್ದ 170 (31%) ಅಭ್ಯರ್ಥಿಗಳು ತಮ್ಮ ವಿರುದ್ಧ ಅತ್ಯಾಚಾರ, ಕೊಲೆ, ಕೊಲೆ ಯತ್ನ, ಅಪಹರಣ, ಮಹಿಳೆಯರ ವಿರುದ್ಧದ ಅಪರಾಧಗಳು ಸೇರಿದಂತೆ ಗಂಭೀರ ಕ್ರಿಮಿನಲ್ ಪ್ರಕರಣಗಳು ದಾಖಲಾಗಿರುವುದಾಗಿ ಘೋಷಿಸಿದ್ದಾರೆ.
2019ರ ಲೋಕಸಭಾ ಚುನಾವಣೆಯಲ್ಲಿ ಜಯಶಾಲಿಯಾಗಿದ್ದ 539 ಸಂಸದರ ಪೈಕಿ 233 (ಶೇ.43) ಸಂಸದರು ತಮ್ಮ ವಿರುದ್ಧ ಕ್ರಿಮಿನಲ್ ಪ್ರಕರಣಗಳಿರುವುದಾಗಿ ಘೋಷಿಸಿಕೊಂಡಿದ್ದರು.
ಈಗಿನ ಲೋಕಸಭೆಯನ್ನು ಅವಲೋಕಿಸುವುದಾದರೆ, ಕ್ರಿಮಿನಲ್ ಪ್ರಕರಣಗಳನ್ನು ಹೊಂದಿರುವ ಪಕ್ಷವಾರು ಸಂಸದರ ಸಂಖ್ಯೆ ಹೀಗಿದೆ:ಬಿಜೆಪಿಯ 240 ವಿಜೇತ ಅಭ್ಯರ್ಥಿಗಳ ಪೈಕಿ ಶೇ 26 ಅಂದರೆ 63 ಅಭ್ಯರ್ಥಿಗಳ ವಿರುದ್ಧ, ಕಾಂಗ್ರೆಸ್ನ 99 ವಿಜೇತ ಅಭ್ಯರ್ಥಿಗಳ ಪೈಕಿ ಶೇ 32 ಅಂದರೆ 32 ಅಭ್ಯರ್ಥಿಗಳ ವಿರುದ್ದ, ಎಸ್ಪಿಯ 37 ವಿಜೇತ ಅಭ್ಯರ್ಥಿಗಳ ಪೈಕಿ ಶೇ 46 ಅಂದರೆ 17 ಅಭ್ಯರ್ಥಿಗಳ ವಿರುದ್ಧ ಮತ್ತು ತೃಣಮೂಲ ಕಾಂಗ್ರೆಸ್ನ 29 ವಿಜೇತ ಅಭ್ಯರ್ಥಿಗಳ ಪೈಕಿ ಶೇ 24 ಅಂದರೆ 7 ಅಭ್ಯರ್ಥಿಗಳ ವಿರುದ್ಧ ಕ್ರಿಮಿನಲ್ ಪ್ರಕರಣಗಳು ದಾಖಲಾಗಿವೆ.
ಸಂಸದರ ಹಣಕಾಸು ಹಿನ್ನೆಲೆ:
543 ವಿಜೇತ ಅಭ್ಯರ್ಥಿಗಳ ಪೈಕಿ 504 (ಶೇ 93) ಮಂದಿ ಕೋಟ್ಯಧಿಪತಿಗಳಾಗಿದ್ಧಾರೆ. 2019ರ ಲೋಕಸಭಾ ಚುನಾವಣೆಯಲ್ಲಿ 539 ಸಂಸದರ ಪೈಕಿ 475 (ಶೇ 88) ಸಂಸದರು ಕೋಟ್ಯಧಿಪತಿಗಳಾಗಿದ್ದರು.
ಆಡಳಿತಾರೂಢ ಪಕ್ಷ ಬಿಜೆಪಿಯ 240 ವಿಜೇತ ಅಭ್ಯರ್ಥಿಗಳಲ್ಲಿ 227 (95%), ಕಾಂಗ್ರೆಸ್ ನ 99 ವಿಜೇತ ಅಭ್ಯರ್ಥಿಗಳಲ್ಲಿ 92 (93%), ಡಿಎಂಕೆಯ 22 ವಿಜೇತ ಅಭ್ಯರ್ಥಿಗಳಲ್ಲಿ 21 (95%), ತೃಣಮೂಲ ಕಾಂಗ್ರೆಸ್ ಕಣಕ್ಕಿಳಿಸಿದ 29 ವಿಜೇತ ಅಭ್ಯರ್ಥಿಗಳಲ್ಲಿ 27 (93%), ಎಎಪಿಯ 3 ವಿಜೇತ ಅಭ್ಯರ್ಥಿಗಳಲ್ಲಿ 3 (100%), ಜೆಡಿಯುನ 12 ವಿಜೇತ ಅಭ್ಯರ್ಥಿಗಳಲ್ಲಿ 12 (100%) ಮತ್ತು ಟಿಡಿಪಿಯ 16 (100%) ವಿಜೇತ ಅಭ್ಯರ್ಥಿಗಳು 1 ಕೋಟಿ ರೂ.ಗಿಂತ ಹೆಚ್ಚಿನ ಆಸ್ತಿಯನ್ನು ಘೋಷಿಸಿದ್ದಾರೆ.
ಈ ಪಟ್ಟಿಯಲ್ಲಿ ಮೊದಲ ಮೂರು ಶ್ರೀಮಂತ ಅಭ್ಯರ್ಥಿಗಳ ಪೈಕಿ ಟಿಡಿಪಿಯ ಡಾ. ಚಂದ್ರಶೇಖರ್ ಪೆಮ್ಮಸಾನಿ 5705 ಕೋಟಿ ರೂ.ಗಿಂತ ಹೆಚ್ಚಿನ ಆಸ್ತಿಯೊಂದಿಗೆ ಮೊದಲ ಸ್ಥಾನದಲ್ಲಿದ್ದರೆ, ತೆಲಂಗಾಣದ ಕೊಂಡಾ ವಿಶ್ವೇಶ್ವರ ರೆಡ್ಡಿ (ಬಿಜೆಪಿ) 4568 ಕೋಟಿ ರೂ.ಗಿಂತ ಹೆಚ್ಚು ಆಸ್ತಿಯೊಂದಿಗೆ 2ನೇ ಸ್ಥಾನದಲ್ಲಿದ್ದಾರೆ. ಬಿಜೆಪಿಯ ಕೈಗಾರಿಕೋದ್ಯಮಿ ನವೀನ್ ಜಿಂದಾಲ್ (ಹರಿಯಾಣ) 1241 ಕೋಟಿ ರೂ.ಗಿಂತ ಹೆಚ್ಚು ಆಸ್ತಿ ಹೊಂದಿದ್ದಾರೆ. ಟಾಪ್ 10 ಶ್ರೀಮಂತ ಅಭ್ಯರ್ಥಿಗಳ ಪೈಕಿ ಐವರು ಬಿಜೆಪಿ, ಮೂವರು ಟಿಡಿಪಿ ಮತ್ತು ಇಬ್ಬರು ಕಾಂಗ್ರೆಸ್ನವರು.