ಮುಂಬೈ:ಮಹಾರಾಷ್ಟ್ರದ ಮುಖ್ಯಮಂತ್ರಿ ಯಾರು ಎಂಬ ಗೊಂದಲಕ್ಕೆ ಈಗಾಗಲೇ ತೆರೆ ಬಿದ್ದಿದೆ. ಬಿಜೆಪಿಯ ಅನುಭವಿ ನಾಯಕ ದೇವೇಂದ್ರ ಫಡ್ನವಿಸ್ ಮೂರನೇ ಅವಧಿಗೆ ಸಿಎಂ ಆಗಿದ್ದಾರೆ.
ಫಡ್ನವಿಸ್ ಬಾಲ್ಯ: ದೇವೇಂದ್ರ ಫಡ್ನವಿಸ್ ಜುಲೈ 22, 1970ರಂದು ಜನಿಸಿದರು. ತಂದೆ ಗಂಗಾಧರರಾವ್ ಫಡ್ನವಿಸ್ ನಾಗ್ಪುರದಿಂದ ಮಹಾರಾಷ್ಟ್ರ ವಿಧಾನ ಪರಿಷತ್ತಿನ ಸದಸ್ಯರಾಗಿದ್ದರು. ತಾಯಿ ಸರಿತಾ ಫಡ್ನವಿಸ್ ವಿದರ್ಭ ಹೌಸಿಂಗ್ ಕ್ರೆಡಿಟ್ ಸೊಸೈಟಿಯ ಮಾಜಿ ನಿರ್ದೇಶಕರು. ಗಂಗಾಧರರಾವ್ ಫಡ್ನವೀಸ್ ಅವರನ್ನು ಕೇಂದ್ರ ಸಚಿವ ನಿತಿನ್ ಗಡ್ಕರಿ ತಮ್ಮ 'ರಾಜಕೀಯ ಗುರು' ಎಂದು ಕರೆಯುತ್ತಾರೆ.
ಚಿಕ್ಕ ಪ್ರಾಯದಲ್ಲಿ ಮೇಯರ್ ಹುದ್ದೆ: 1992ರಲ್ಲಿ 22 ವರ್ಷದವರಾಗಿದ್ದಾಗ ದೇವೇಂದ್ರ ಫಡ್ನವಿಸ್ ಕಾರ್ಪೊರೇಟರ್ ಆಗುವ ಮೂಲಕ ರಾಜಕೀಯಕ್ಕೆ ಪದಾರ್ಪಣೆ ಮಾಡಿದರು. ಚುರುಕು ಬುದ್ಧಿ, ರಾಜಕೀಯ ಹಿತಾಸಕ್ತಿ ಹೊಂದಿದ್ದ ಇವರು 1997ರಲ್ಲಿ ತಮ್ಮ 27ನೇ ವಯಸ್ಸಿನಲ್ಲಿ ನಾಗ್ಪುರ ಮುನ್ಸಿಪಲ್ ಕಾರ್ಪೊರೇಶನ್ಗೆ ಮೇಯರ್ ಆಗಿ ಆಯ್ಕೆಯಾದರು. ಇದರೊಂದಿಗೆ 'ಭಾರತದಲ್ಲೇ ಎರಡನೇ ಅತೀ ಚಿಕ್ಕ ಪ್ರಾಯದ ಮೇಯರ್' ಎಂಬ ಹೆಗ್ಗಳಿಕೆಗೆ ಪಾತ್ರರಾದರು. 1999ರಿಂದ ಸತತವಾಗಿ ನಾಗಪುರವನ್ನು ಪ್ರತಿನಿಧಿಸಿ ಮಹಾರಾಷ್ಟ್ರದ ವಿಧಾನಸಭಾ ಸದಸ್ಯರಾಗಿ ಚುನಾಯಿಸಲ್ಪಟ್ಟರು.
ಮೇಯರ್ ಆಗಿ ಸತತ ಎರಡು ಅವಧಿ ಪೂರ್ಣಗೊಳಿಸಿದ ನಂತರ ಫಡ್ನವೀಸ್ ಅವರನ್ನು 2013ರಲ್ಲಿ ಮಹಾರಾಷ್ಟ್ರ ಬಿಜೆಪಿ ಅಧ್ಯಕ್ಷರನ್ನಾಗಿ ನೇಮಕಗೊಳಿಸಲಾಯಿತು. ಇದು ಅವರ ರಾಜಕೀಯ ಪ್ರಭಾವವನ್ನು ಮತ್ತಷ್ಟು ಹೆಚ್ಚಿಸಿತು. ಮುಂದೆ, 2014ರಲ್ಲಿ ಮುಖ್ಯಮಂತ್ರಿ ಗಾದಿಗೇರಿದರು.
ಮುಖ್ಯಮಂತ್ರಿಯಾಗಿ ಮೊದಲ ಅವಧಿ: ಫಡ್ನವಿಸ್ ಮೃದುಭಾಷಿ. ದ್ವೇಷವಿಲ್ಲದ ರಾಜಕಾರಣದಿಂದಲೇ ಎಲ್ಲಾ ಪಕ್ಷದವರೊಂದಿಗೂ ಒಡನಾಟವಿಟ್ಟುಕೊಂಡು ಬಂದವರು. ಮುಖ್ಯಮಂತ್ರಿಯಾಗಿ ಅವರ ಮೊದಲ ಅವಧಿಯ ಕೆಲವು ಪ್ರಮುಖ ಸಾಧನೆಗಳ ಪೈಕಿ ಸೇವಾ ಹಕ್ಕು ಕಾಯಿದೆಯೂ ಒಂದು. ಇವರು ಪ್ರಾರಂಭಿಸಿದ ಜಲಯುಕ್ತ ಶಿವರ್ ಅಭಿಯಾನ ರಾಜ್ಯದಾದ್ಯಂತ ಬರಗಾಲವನ್ನು ತೊಡೆದು ಹಾಕುವಲ್ಲಿ ಯಶಸ್ಸು ಕಂಡಿತು. ಈ ಯೋಜನೆಯ ಮೂಲಕ 22,000ಕ್ಕೂ ಹೆಚ್ಚು ಹಳ್ಳಿಗಳ ನೀರಿನ ಸಮಸ್ಯೆ ಬಗೆಹರಿಸಲಾಯಿತು. ಮುಂಬೈ ಮತ್ತು ಪುಣೆ ಮೆಟ್ರೋ ವಿಸ್ತರಣೆ, ನಾಗ್ಪುರ-ಮುಂಬೈ ಸಮೃದ್ಧಿ ಎಕ್ಸ್‌ಪ್ರೆಸ್‌ವೇ, ಕರಾವಳಿ ರಸ್ತೆ ಯೋಜನೆ ಮತ್ತು ಮುಂಬೈ ಟ್ರಾನ್ಸ್-ಹಾರ್ಬರ್‌ನಂತಹ ಯೋಜನೆಗಳಿಗೆ ಶಕ್ತಿ ತುಂಬಿದ ಶ್ರೇಯಸ್ಸು ಕೂಡ ಇವರಿಗೆ ಸಲ್ಲುತ್ತದೆ.
ರಾಜಕೀಯ ತಂತ್ರಗಾರಿಕೆ ಮತ್ತು ಪ್ರಾಯೋಗಿಕ ವಿಧಾನಕ್ಕೆ ಹೆಸರುವಾಸಿಯಾದ ಫಡ್ನವಿಸ್, 2022ರಲ್ಲಿ ಮಹಾರಾಷ್ಟ್ರ ತೀವ್ರ ರಾಜಕೀಯ ವಿಪ್ಲವ ಎದುರಿಸುತ್ತಿದ್ದ ಸಮಯದಲ್ಲಿ ರಾಜಕೀಯ ಬುದ್ಧಿವಂತಿಕೆ ತೋರ್ಪಡಿಸಿದ್ದನ್ನು ಮರೆಯುವಂತಿಲ್ಲ. ಮೂರು ವರ್ಷದ ಹಿಂದೆ ಶಿವಸೇನೆ ವಿಭಜನೆಯಾದಾಗ ಏಕನಾಥ್ ಶಿಂಧೆ ನೇತೃತ್ವದ ಸಮ್ಮಿಶ್ರ ಸರ್ಕಾರದಲ್ಲಿ ಫಡ್ನವೀಸ್ ಉಪಮುಖ್ಯಮಂತ್ರಿಯಾದರು.