ತಿರುಪ್ಪೂರು (ತಮಿಳುನಾಡು):ತಮಿಳುನಾಡಿನ ತಿರುಪ್ಪೂರು ಜಿಲ್ಲೆಯಲ್ಲಿ ಹೇಯ ಕೃತ್ಯವೊಂದು ಬೆಳಕಿಗೆ ಬಂದಿದೆ. 17 ವರ್ಷದ ಬಾಲಕಿ ಮೇಲೆ ಮೂವರು ಅಪ್ರಾಪ್ತ ಬಾಲಕರು ಸೇರಿದಂತೆ 9 ಮಂದಿ ಸಾಮೂಹಿಕ ಅತ್ಯಾಚಾರ ಎಸಲಾಗಿದೆ. ಇದೀಗ ಸಂತ್ರಸ್ತೆ 4 ತಿಂಗಳ ಗರ್ಭಿಣಿಯಾಗಿದ್ದಾಳೆ ಎಂದು ವರದಿಯಾಗಿದೆ.
ಸಂತ್ರಸ್ತ ಬಾಲಕಿ ತನ್ನ ಅಜ್ಜನ ಮನೆಯಲ್ಲಿ ವಾಸಿಸುತ್ತಿದ್ದಳು. ಕಳೆದ ಕೆಲ ದಿನಗಳಿಂದ ಬಾಲಕಿಯ ಆರೋಗ್ಯದಲ್ಲಿ ಏರುಪೇರಾಗಿದೆ. ಇದರಿಂದ ಆಸ್ಪತ್ರೆಗೆ ಕರೆದೊಯ್ದು ತಪಾಸಣೆ ನಡೆಸಲಾಗಿದೆ. ಆಗ ಬಾಲಕಿ 4 ತಿಂಗಳ ಗರ್ಭಿಣಿ ಎಂದು ತಿಳಿದು ಬಂದಿದೆ. ಈ ಬಗ್ಗೆ ಬಾಲಕಿಯನ್ನು ವಿಚಾರಣೆ ನಡೆಸಿದಾಗ ತನ್ನ ಮೇಲೆ ಸಾಮೂಹಿಕ ಅತ್ಯಾಚಾರ ನಡೆದಿರುವ ಕೃತ್ಯವನ್ನು ತಿಳಿಸಿದ್ದಾರೆ.
ಇದರಿಂದ ಆಘಾತಗೊಂಡ ಬಾಲಕಿಯ ಅಜ್ಜ ಉಡುಮಲೈ ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಈ ದೂರಿನ ಆಧಾರದ ಮೇಲೆ ಪೊಲೀಸರು ತನಿಖೆ ನಡೆಸಿ, ಪ್ರಕಾಶ್ (24), ಭಾವ ಭಾರತಿ (22), ಪರಣಿಕುಮಾರ್ (21), ಜಯಕಾಳೇಸ್ವನ್ (19), ಮದನಕುಮಾರ್ (19), ನಂದಗೋಪಾಲ್ (19) ಹಾಗೂ 14, 15 ಮತ್ತು 16 ವರ್ಷದ ಮೂವರು ಬಾಲಕರು ಸೇರಿ ಒಟ್ಟು 9 ಮಂದಿ ಆರೋಪಿಗಳನ್ನು ಗುರುತಿಸಿದ್ದಾರೆ.
ಮತ್ತೊಬ್ಬ ಬಾಲಕಿ ಮೇಲೂ ಅತ್ಯಾಚಾರ?: ಇದೇ ಆರೋಪಿಗಳು 13 ವರ್ಷದ ಮತ್ತೊಬ್ಬ ಬಾಲಕಿ ಮೇಲೂ ಇದೇ ಆರೋಪಿಗಳ ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ ಎನ್ನಲಾಗುತ್ತಿದೆ. ಆದರೆ, ನಿಖರವಾದ ಮಾಹಿತಿ ಲಭ್ಯವಾಗಿಲ್ಲ. ಸದ್ಯಕ್ಕೆ 17 ವರ್ಷದ ಬಾಲಕಿ ಮೇಲಿನ ಅತ್ಯಾಚಾರ ಸಂಬಂಧ ಪೋಕ್ಸೋ ಕಾಯ್ದೆಯಡಿ ಎಲ್ಲ 9 ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಈಗಾಗಲೇ, ನ್ಯಾಯಾಲಯಕ್ಕೂ ಹಾಜರುಪಡಿಸಲಾಗಿದೆ. ಬಂಧಿತ ಪೈಕಿ ಆರು ಜನರನ್ನು ಕೊಯಮತ್ತೂರು ಸೆಂಟ್ರಲ್ ಜೈಲಿನಲ್ಲಿ ಇರಿಸಲಾಗಿದೆ. ಉಳಿದ ಮೂವರು ಅಪ್ರಾಪ್ತರನ್ನು ಕೊಯಮತ್ತೂರಿನ ಸರ್ಕಾರದ ಬಾಲ ಗೃಹಕ್ಕೆ ರವಾನಿಸಲಾಗಿದೆ.