ನವದೆಹಲಿ:ಮಹಾರಾಷ್ಟ್ರ ಮತ್ತು ಜಾರ್ಖಂಡ್ ವಿಧಾನಸಭೆ ಚುನಾವಣೆಯ ಜೊತೆಗೆ ನಡೆದಿದ್ದ 14 ರಾಜ್ಯಗಳ ವಿಧಾನಸಭೆ ಉಪ ಚುನಾವಣೆಯಲ್ಲಿ ಹೆಚ್ಚೂ ಕಡಿಮೆ ಆಯಾ ರಾಜ್ಯಗಳಲ್ಲಿ ಆಡಳಿತದಲ್ಲಿರುವ ಪಕ್ಷಗಳು ಜಯಭೇರಿ ಬಾರಿಸಿವೆ.
ಅಸ್ಸಾಂ, ಬಿಹಾರ, ಛತ್ತೀಸ್‌ಗಢ, ಗುಜರಾತ್, ಕರ್ನಾಟಕ, ಕೇರಳ, ಮಧ್ಯಪ್ರದೇಶ, ಮೇಘಾಲಯ, ಪಂಜಾಬ್, ರಾಜಸ್ಥಾನ, ಸಿಕ್ಕಿಂ, ಉತ್ತರಾಖಂಡ, ಉತ್ತರ ಪ್ರದೇಶ ಮತ್ತು ಪಶ್ಚಿಮ ಬಂಗಾಳದಲ್ಲಿ ಉಪ ಚುನಾವಣೆಗಳು ನಡೆದಿದ್ದವು.
ಅಸ್ಸಾಂನಲ್ಲಿ ಬಿಜೆಪಿ ಆಡಳಿತದಲ್ಲಿದ್ದು, ಇಲ್ಲಿ ನಡೆದ ಐದು ಕ್ಷೇತ್ರಗಳ ಉಪಚುನಾವಣೆಯಲ್ಲಿ ಮೂರರಲ್ಲಿ ಜಯ ಸಾಧಿಸಿದೆ. ಇನ್ನೆರಡದಲ್ಲಿ ಯುನೈಟೆಡ್ ಪೀಪಲ್ಸ್ ಪಕ್ಷ (ಲಿಬರಲ್), ಅಸ್ಸಾಂ ಗಣ ಪರಿಷತ್ ತಲಾ ಒಂದರಲ್ಲಿ ಜಯಿಸಿವೆ. ಬಿಹಾರದಲ್ಲಿ ನಡೆದ 4 ಕ್ಷೇತ್ರಗಳ ಉಪ ಚುನಾವಣೆಯಲ್ಲಿ ಎನ್ಡಿಎ ಮೈತ್ರಿಯು ಭರ್ಜರಿ ಜಯ ಸಾಧಿಸಿದೆ. ಬಿಜೆಪಿ 2, ಜೆಡಿಯು 1, ಇನ್ನೊಂದರಲ್ಲಿ ಹಿಂದುಸ್ತಾನಿ ಅವಾಮಿ ಮೋರ್ಚಾ ಗೆದ್ದಿದೆ.
ಕರ್ನಾಟಕದಲ್ಲಿ ಕಾಂಗ್ರೆಸ್ ಕ್ಲೀನ್ಸ್ವೀಪ್;ಇನ್ನೂ, ಕರ್ನಾಟಕದ ಮೂರು ಕ್ಷೇತ್ರಗಳಿಗೆ ನಡೆದ ಉಪ ಚುನಾವಣೆಯಲ್ಲಿ ಆಡಳಿತಾರೂಢ ಕಾಂಗ್ರೆಸ್ ಭರ್ಜರಿ ಸಾಧನೆ ಮಾಡಿದೆ. ಮೂರೂ ಕ್ಷೇತ್ರಗಳಲ್ಲಿ ಜಯ ಸಾಧಿಸಿ, ಬಿಜೆಪಿ ಮತ್ತು ಜೆಡಿಎಸ್ನ ಎನ್ಡಿಎ ಮೈತ್ರಿಗೆ ಮುಖಭಂಗ ಮಾಡಿದೆ.
ರಾಜಸ್ಥಾನದ 7 ಕ್ಷೇತ್ರಗಳಿಗೆ ಉಪಚುನಾವಣೆ ನಡೆದಿದ್ದು, ಅದರಲ್ಲಿ ಆಡಳಿತದಲ್ಲಿರುವ ಬಿಜೆಪಿ ಕಮಾಲ್ ಮಾಡಿದೆ. 5 ಕ್ಷೇತ್ರಗಳಲ್ಲಿ ಕೇಸರಿ ಪಡೆ ಗೆಲುವು ಕಂಡಿದೆ. ಕಾಂಗ್ರೆಸ್, ಭಾರತ್ ಆದಿವಾಸಿ ಪಕ್ಷವು ತಲಾ ಒಂದರಲ್ಲಿ ಗೆದ್ದಿದೆ.