ಜೈಪುರ: ರಾಜಸ್ಥಾನದ ನೀಮ್ ಕಾ ಥಾನಾ ಜಿಲ್ಲೆಯಲ್ಲಿರುವ ಹಿಂದೂಸ್ತಾನ್ ಕಾಪರ್ ಲಿಮಿಟೆಡ್‌ನ ಕೋಲಿಹಾನ್ ಗಣಿಯಲ್ಲಿ ಲಿಫ್ಟ್ ವೈರ್ ತುಂಡಾಗಿ 14 ಅಧಿಕಾರಿಗಳು ಗಣಿಯೊಳಗೆ ಸಂಕಷ್ಟದಲ್ಲಿ ಸಿಲುಕಿದ್ದಾರೆ. ಈ ಘಟನೆ ಮಂಗಳವಾರ ರಾತ್ರಿ ನಡೆದಿದೆ. ಈಗಾಗಲೇ 8 ಮಂದಿಯನ್ನು ರಕ್ಷಿಸಲಾಗಿದ್ದು, ಇನ್ನುಳಿದವರಿಗೆ ಕಾರ್ಯಾಚರಣೆ ನಡೆಯುತ್ತಿದೆ.
ಪೊಲೀಸ್ ಅಧಿಕಾರಿಗಳು ನೀಡಿದ ಮಾಹಿತಿ ಪ್ರಕಾರ, ಮೇ 14ರಂದು ವಿಜಿಲೆನ್ಸ್ ತಂಡ ತಪಾಸಣೆಗಾಗಿ ಗಣಿಗೆ ಆಗಮಿಸಿತ್ತು. ಈ ವೇಳೆ ಸಿಬ್ಬಂದಿಯ ಸಾಗಣೆಗೆ ಬಳಸಲಾಗುವ ಶಾಫ್ಟ್ (ಗಣಿ ಲಿಫ್ಟ್) ಮೂಲಕ ಗಣಿಯೊಳಗೆ ಪ್ರವೇಶಿಸಿ ಮೇಲಕ್ಕೆ ಬರುವಾಗ ಶಾಫ್ಟ್ ವೈರ್ ತುಂಡಾಗಿದೆ. ಸದ್ಯ ಎಂಟು ಮಂದಿಯನ್ನು ರಕ್ಷಿಸಲಾಗಿದ್ದು ಜೈಪುರದ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. ಉಳಿದಂತೆ, ಇನ್ನೂ ನಾಲ್ಕು ಮಂದಿ 1,875 ಅಡಿ ಆಳದಲ್ಲಿ ಸಿಲುಕಿದ್ದಾರೆ. ಗಣಿ ಲಿಫ್ಟ್‌ನಲ್ಲಿ ಕೋಲ್ಕತ್ತಾದ ವಿಜಿಲೆನ್ಸ್ ತಂಡ ಮತ್ತು ಹಿರಿಯ ಕೆಸಿಸಿ ಅಧಿಕಾರಿಗಳು ಸಿಲುಕಿಕೊಂಡಿದ್ದಾರೆ.