ಗುವಾಹಟಿ:ಮಣಿಪುರದ ಸಂಘರ್ಷ ಪೀಡಿತ ಜಿರೀಬಾಮ್ ಜಿಲ್ಲೆಯ ಜಕುರಾಧೋರ್‌ನಲ್ಲಿ ಸೋಮವಾರ ನಡೆದ ಗುಂಡಿನ ಕಾಳಗದಲ್ಲಿ ಕನಿಷ್ಠ 11 ಶಂಕಿತ ಉಗ್ರರು ಹತರಾಗಿದ್ದು, ಇಬ್ಬರು ಸಿಆರ್‌ಪಿಎಫ್ (ಕೇಂದ್ರೀಯ ಮೀಸಲು ಪೊಲೀಸ್ ಪಡೆ) ಯೋಧರು ಗಾಯಗೊಂಡ ಘಟನೆ ನಡೆದಿದೆ.
''ಜಿರೀಬಾಮ್ ಜಕುರಾಧೋ ಪ್ರದೇಶದಲ್ಲಿ ಮೈತೆಯಿ ಸಮುದಾಯಕ್ಕೆ ಸೇರಿದ ಕೆಲವು ಅಂಗಡಿಗಳಿಗೆ ಶಂಕಿತ ಉಗ್ರರು ಇದ್ದಕ್ಕಿದ್ದಂತೆ ಬೆಂಕಿ ಹಚ್ಚತೊಡಗಿದ್ದರು. ಈ ವೇಳೆ ಇದನ್ನು ತಡೆಯಲು ಬಂದ ಸಿಆರ್‌ಪಿಎಫ್ ಯೋಧರ ಮೇಲೆ ಗುಂಡಿನ ದಾಳಿಗೆ ಮುಂದಾಗಿದ್ದರು. ಪ್ರತಿಯಾಗಿ ಸಿಆರ್‌ಪಿಎಫ್ ಯೋಧರು ಕೂಡ ಗುಂಡು ಹಾರಿಸಿದ್ದಾರೆ. ಪರಿಣಾಮ 11 ಮಂದಿ ಶಂಕಿತ ಉಗ್ರರು ಹತರಾಗಿದ್ದು, ಗುಂಡಿನ ಕಾಳಗದಲ್ಲಿ ಇಬ್ಬರು ಸಿಆರ್‌ಪಿಎಫ್ ಯೋಧರು ಸಹ ಗಾಯಗೊಂಡಿದ್ದಾರೆ. ಶೋಧ ಕಾರ್ಯಾಚರಣೆ ಮುಂದುವರೆದಿದೆ. ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದ್ದು, ಪರಿಸ್ಥಿತಿ ನಿಯಂತ್ರಣಕ್ಕಾಗಿ ಕಾರ್ಯಾಚರಣೆ ನಡೆದಿದೆ'' ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಈ ಪ್ರದೇಶದ ಐವರು ನಾಗರಿಕರು ನಾಪತ್ತೆಯಾಗಿದ್ದು, ನಾಪತ್ತೆಯಾದ ನಾಗರಿಕರ ಪತ್ತೆಗೆ ಶೋಧ ನಡೆಸಲಾಗುತ್ತಿದೆ. ಮೃತರ ಶವಗಳನ್ನು ಬೊರೊಬೆಕ್ರಾ ಪೊಲೀಸ್ ಠಾಣೆಗೆ ತರಲಾಗಿದೆ. ಗಾಯಗೊಂಡ ಇಬ್ಬರು ಸಿಆರ್‌ಪಿಎಫ್ ಸಿಬ್ಬಂದಿಯ ಪೈಕಿ ಒಬ್ಬರ ಸ್ಥಿತಿ ಗಂಭೀರವಾಗಿದೆ ಎಂದು ಸಹ ಪೊಲೀಸರು ತಿಳಿಸಿದ್ದಾರೆ.