ಚಂಡೀಗಢ:ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ ನೀಡಲು ಕಾನೂನು ಜಾರಿ ಮಾಡುವುದು ಸೇರಿದಂತೆ ತಮ್ಮ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಸರಕಾರವನ್ನು ಒತ್ತಾಯಿಸಲು 101 ರೈತರ ಗುಂಪು ಜನವರಿ 21ರಂದು ಶಂಭು ಗಡಿಯಿಂದ ದಿಲ್ಲಿಗೆ ಪಾದಯಾತ್ರೆಯನ್ನು ಪುನರಾರಂಭಿಸಲಿದೆ ಎಂದು ರೈತ ಮುಖಂಡ ಸರ್ವನ್ ಸಿಂಗ್ ಪಂಧೇರ್ ಗುರುವಾರ ತಿಳಿಸಿದ್ದಾರೆ.
101 ರೈತರ ಗುಂಪು ಕಳೆದ ವರ್ಷ ಡಿಸೆಂಬರ್ 6, ಡಿಸೆಂಬರ್ 8 ಮತ್ತು ಡಿಸೆಂಬರ್ 14 ರಂದು ಶಂಭು ಗಡಿಯ ಮೂಲಕ ಕಾಲ್ನಡಿಗೆಯಲ್ಲಿ ದೆಹಲಿಗೆ ಹೋಗಲು ಮೂರು ಬಾರಿ ಪ್ರಯತ್ನ ಮಾಡಿತ್ತು. ಆದರೆ ಹರಿಯಾಣದಲ್ಲಿ ಪೊಲೀಸರು ಅವರನ್ನು ಅಡ್ಡಗಟ್ಟಿದ್ದರು.
ಉಪವಾಸ ನಿರತ ರೈತ ನಾಯಕ ಜಗಜಿತ್ ಸಿಂಗ್ ದಲ್ಲೆವಾಲ್ ಅವರ ಆಮರಣಾಂತ ಉಪವಾಸ ಗುರುವಾರ 52 ನೇ ದಿನಕ್ಕೆ ಕಾಲಿಟ್ಟಿದ್ದು, ಅವರಿಗೆ ಬೆಂಬಲ ಸೂಚಿಸಿ 111 ರೈತರ ಮತ್ತೊಂದು ಗುಂಪು ಖಾನೌರಿ ಬಳಿಯ ಗಡಿಯ ಹರಿಯಾಣ ಭಾಗದಲ್ಲಿ ಆಮರಣಾಂತ ಉಪವಾಸ ಆರಂಭಿಸಿದೆ. ಅದಾಗಿ ಒಂದು ದಿನದ ನಂತರ ಈಗ 101 ರೈತರ ಗುಂಪು ದೆಹಲಿಗೆ ಜಾಥಾ ನಡೆಸಲು ತೀರ್ಮಾನಿಸಿದೆ.
ಪಂಜಾಬ್ ಮತ್ತು ಹರಿಯಾಣ ನಡುವಿನ ಶಂಭು ಗಡಿಯಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಕಿಸಾನ್ ಮಜ್ದೂರ್ ಮೋರ್ಚಾ ನಾಯಕ ಪಂಧೇರ್, ಕಳೆದ 11 ತಿಂಗಳುಗಳಿಂದ ಶಂಭು ಮತ್ತು ಖನೌರಿಯಲ್ಲಿ ಕ್ಯಾಂಪ್ ಮಾಡುತ್ತಿರುವ ರೈತರ ಬೇಡಿಕೆಗಳನ್ನು ಈಡೇರಿಸಲು ಒಪ್ಪದ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.