ಕಟಕ್ (ಒಡಿಶಾ) :ಇಲ್ಲಿನ ನುವಾಪಾದ ಜಿಲ್ಲೆಯ ಗಡಿ ಪ್ರದೇಶಗಳಲ್ಲಿ ಮತ್ತು ಗರಿಯಾಬಂಧ್‌ನಲ್ಲಿ ತಡರಾತ್ರಿ ಹಾಗೂ ಮುಂಜಾನೆ ಒಡಿಶಾ ಮತ್ತು ಛತ್ತೀಸ್‌ಗಢ ಪೊಲೀಸರು ಮತ್ತು ಸಿಆರ್‌ಪಿಎಫ್ ಸಿಬ್ಬಂದಿ ಜಂಟಿಯಾಗಿ ನಡೆಸಿದ ಕಾರ್ಯಾಚರಣೆಯಲ್ಲಿ 16 ನಕ್ಸಲರು ಹತರಾಗಿದ್ದಾರೆ.
ಕಾರ್ಯಾಚರಣೆಯ ವೇಳೆ ಅಪಾರ ಪ್ರಮಾಣದ ಬಂದೂಕುಗಳು, 1 ಎಸ್‌ಎಲ್‌ಆರ್ ಸೇರಿದಂತೆ ಮದ್ದುಗುಂಡುಗಳು ಮತ್ತು ಐಇಡಿಗಳನ್ನು ಭದ್ರತಾ ಪಡೆಗಳು ವಶಪಡಿಸಿಕೊಂಡಿವೆ.
ಮೈನ್‌ಪುರ ಪೊಲೀಸ್ ಠಾಣೆ ವ್ಯಾಪ್ತಿಯ ಕಾಡಿನಲ್ಲಿ ಸೋಮವಾರ ತಡರಾತ್ರಿ ಮತ್ತು ಮಂಗಳವಾರ ಮುಂಜಾನೆ ಹೊಸದಾಗಿ ಮತ್ತೆ ಗುಂಡಿನ ಚಕಮಕಿ ನಡೆದಿದ್ದು, 16ಕ್ಕೂ ಹೆಚ್ಚು ನಕ್ಸಲೀಯರು ಸಾವನ್ನಪ್ಪಿದ್ದಾರೆ. ಹತ್ಯೆಯಾದ ನಕ್ಸಲೀಯರಲ್ಲಿ, ನಕ್ಸಲೀಯ ಕೇಂದ್ರ ಸಮಿತಿಯ ಹಿರಿಯ ಸದಸ್ಯ ಜಯರಾಮ್ ಅಲಿಯಾಸ್ ಚಲಪತಿ ಕೂಡ ಸೇರಿದ್ದು, ಆತನ ತಲೆಯ ಮೇಲೆ 1 ಕೋಟಿ ರೂಪಾಯಿ ಬಹುಮಾನ ಘೋಷಿಸಲಾಗಿತ್ತು ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಸೋಮವಾರ ಮುಂಜಾನೆ ನಡೆದ ಕಾರ್ಯಾಚರಣೆ ಸಂದರ್ಭದಲ್ಲಿ ನಡೆದ ಎನ್‌ಕೌಂಟರ್‌ನಲ್ಲಿ ಇಬ್ಬರು ಮಹಿಳಾ ನಕ್ಸಲೀಯರನ್ನು ಗುಂಡಿಕ್ಕಿ ಕೊಲ್ಲಲಾಯಿತು. ಈ ಸಂದರ್ಭದಲ್ಲಿ ನಡೆದ ಗುಂಡಿನ ಚಕಮಕಿಯಲ್ಲಿ ಒಬ್ಬ ಕೋಬ್ರಾ ಜವಾನ್ ಗಾಯಗೊಂಡರು ಎಂದು ಅಧಿಕಾರಿ ತಿಳಿಸಿದ್ದಾರೆ. ಜಿಲ್ಲಾ ರಿಸರ್ವ್ ಗಾರ್ಡ್ (ಡಿಆರ್‌ಜಿ), ಕೇಂದ್ರೀಯ ಮೀಸಲು ಪೊಲೀಸ್ ಪಡೆ (ಸಿಆರ್‌ಪಿಎಫ್), ಛತ್ತೀಸ್‌ಗಢದ ಕೋಬ್ರಾ ಮತ್ತು ಒಡಿಶಾದ ವಿಶೇಷ ಕಾರ್ಯಾಚರಣೆ ಗುಂಪು (ಎಸ್‌ಒಜಿ) ಯ ಭದ್ರತಾ ಸಿಬ್ಬಂದಿಯ ಜಂಟಿ ತಂಡವು ಕಾರ್ಯಾಚರಣೆಯಲ್ಲಿ ತೊಡಗಿಸಿಕೊಂಡಿತ್ತು ಎಂದು ಹಿರಿಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.