ಕರ್ನಾಟಕ

karnataka

ಬಿಜೆಪಿಗೆ ಧೈರ್ಯವಿಲ್ಲ, ಹೀಗಾಗಿ ಸದನಕ್ಕೆ ಬಂದಿಲ್ಲ: ಡಿ ಕೆ ಶಿವಕುಮಾರ್

By

Published : Jul 21, 2023, 9:19 PM IST

ನಮ್ಮ ಸರ್ಕಾರ ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದಿರುವುದನ್ನು ಕಂಡು ಬಿಜೆಪಿ ಸದಸ್ಯರು ಆಘಾತಕ್ಕೊಳಗಾಗಿದ್ದಾರೆ ಎಂದು ಡಿಸಿಎಂ ಡಿ ಕೆ ಶಿವಕುಮಾರ್ ಅವರು ತಿಳಿಸಿದ್ದಾರೆ.

ಡಿಸಿಎಂ ಡಿ ಕೆ ಶಿವಕುಮಾರ್
ಡಿಸಿಎಂ ಡಿ ಕೆ ಶಿವಕುಮಾರ್

ಡಿಸಿಎಂ ಡಿ ಕೆ ಶಿವಕುಮಾರ್

ಬೆಂಗಳೂರು : ಬಿಜೆಪಿಗೆ ಸದನವನ್ನು ಎದುರಿಸುವ ಧೈರ್ಯವಿರಲಿಲ್ಲ. ಧೈರ್ಯ ಇದ್ದಿದ್ದರೆ ಸದನದ ಚರ್ಚೆಯಲ್ಲಿ ಭಾಗವಹಿಸುತ್ತಿದ್ದರು ಎಂದು ಡಿಸಿಎಂ ಡಿ. ಕೆ ಶಿವಕುಮಾರ್ ಅಭಿಪ್ರಾಯಪಟ್ಟಿದ್ದಾರೆ. ವಿಧಾನಸೌಧದಲ್ಲಿ ಸುದ್ದಿಗಾರರ ಜತೆ ಮಾತನಾಡಿ, ನಮ್ಮ ಸರ್ಕಾರ ಗ್ಯಾರಂಟಿ ಯೋಜನೆ ಜಾರಿ ಮಾಡಿರುವುದನ್ನು ಕಂಡು ಬಿಜೆಪಿ ಸದಸ್ಯರು ಆಘಾತಕ್ಕೊಳಗಾಗಿದ್ದಾರೆ. ಹೀಗಾಗಿ ಅನಗತ್ಯ ವಿಚಾರವಾಗಿ ಗದ್ದಲ ಮಾಡಿದ್ದಾರೆ. ಅವರಿಗೆ ಪ್ರತಿಪಕ್ಷದ ನಾಯಕತ್ವದ ಮಹತ್ವ ಗೊತ್ತಿಲ್ಲ. ಇದು ಸಾಂವಿಧಾನಿಕ ಹುದ್ದೆ. ದೇಶದ ಇತಿಹಾಸದಲ್ಲಿ ಮೊದಲ ಬಾರಿಗೆ ಬಜೆಟ್ ಅಧಿವೇಶನ ಹಾಗೂ ರಾಜ್ಯಪಾಲರ ಭಾಷಣ ವಿರೋಧ ಪಕ್ಷದ ನಾಯಕರ ಅನುಪಸ್ಥಿತಿಯಲ್ಲಿ ನಡೆದಿದೆ. ರಾಜಕೀಯವಾಗಿ ತಮ್ಮ ಅಸ್ತಿತ್ವ ತೋರಿಸಲು ಧರಣಿಗಳನ್ನು ಮಾಡುತ್ತಿದ್ದಾರೆ ಎಂದರು.

ಡಿಸಿಎಂ ಡಿ ಕೆ ಶಿವಕುಮಾರ್

ಕುಮಾರಸ್ವಾಮಿ ಹಾಗೂ ಬೊಮ್ಮಾಯಿ ಅವರ ಜಂಟಿ ಸುದ್ದಿಗೋಷ್ಠಿ ಹಾಗೂ ಆ ಬಗ್ಗೆ ಅವರದೇ ಪಕ್ಷದ ನಾಯಕರ ಅಸಮಾಧಾನದ ಬಗ್ಗೆ ಮಾಧ್ಯಮಗಳು ಪ್ರಶ್ನಿಸಿದಾಗ, ‘ಅದು ಅವರಿಗೆ ಬಿಟ್ಟ ವಿಚಾರ. ಆ ಬಗ್ಗೆ ನಾವು ಮಾತನಾಡುವುದಿಲ್ಲ. ಜಾತ್ಯತೀತತೆ ವಿಚಾರವಾಗಿ ದೇವೇಗೌಡರು ತಮ್ಮ ಪುಸ್ತಕದಲ್ಲಿ ಹೇಳಿಕೊಂಡಿದ್ದಾರೆ. ದೇವೇಗೌಡರೇನು ತಮ್ಮ ಸಿದ್ಧಾಂತ ಬದಲಿಸಿದ್ದಾರಾ? ಪಕ್ಷದ ಸಿದ್ಧಾಂತ, ಮೈತ್ರಿ ವಿಚಾರವಾಗಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷರೇ ಮಾತನಾಡಲಿ’ ಎಂದರು.

ತಮಿಳುನಾಡು ಸಚಿವರು ಕೇಂದ್ರ ಜಲಶಕ್ತಿ ಸಚಿವಾಲಯಕ್ಕೆ ಪತ್ರ ಬರೆದು ಕರ್ನಾಟಕದಿಂದ ತಮಿಳುನಾಡಿಗೆ ನೀರು ಹರಿಸುವಂತೆ ಕೇಳಿರುವ ಬಗ್ಗೆ ಪ್ರಶ್ನಿಸಿದಾಗ, ‘ಕರ್ನಾಟಕದಲ್ಲಿ ಈ ಬಾರಿ ವಾಡಿಕೆ ಪ್ರಮಾಣದ ಮಳೆಯಾಗಿಲ್ಲ. ಆದರೂ ಇರುವ ನೀರಿನಲ್ಲೇ ಹರಿಸುವ ಸಾಧ್ಯತೆ ಬಗ್ಗೆ ಪರಿಶೀಲಿಸಬಹುದು. ಈ ತೀರ್ಮಾನ ಕಾವೇರಿ ಪ್ರಾಧಿಕಾರದ ಬಳಿ ಇದ್ದು, ನಾವು ಅದರ ತೀರ್ಮಾನ ಗೌರವಿಸುತ್ತೇವೆ ಎಂದರು.

ಕಾವೇರಿ ಪ್ರಾಧಿಕಾರದವರು ಕುಡಿಯುವ ನೀರಿನ ಅಗತ್ಯ ಗಮನದಲ್ಲಿಟ್ಟುಕೊಂಡು ನೀರು ಬಿಡಬೇಕಾಗುತ್ತದೆ. ಇಂದು, ನಾಳೆ ಮಳೆ ಬೀಳುವ ನಿರೀಕ್ಷೆ ಇದೆ. ಕಳೆದೆರಡು ವರ್ಷಗಳ ಕಾಲ ಉತ್ತಮ ಮಳೆಯಾಗಿತ್ತು’ ಎಂದು ತಿಳಿಸಿದರು. ನೈಸ್ ಅಕ್ರಮದ ಕುರಿತು ಬಿಜೆಪಿ ಸರ್ಕಾರ ತನಿಖೆ ಮಾಡಿದ್ದು, ಈಗಿನ ಸರ್ಕಾರ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಕುಮಾರಸ್ವಾಮಿ ಅವರ ಆಗ್ರಹದ ಬಗ್ಗೆ ಕೇಳಿದಾಗ, ‘ನನಗೆ ಮಾಹಿತಿ ಇರುವ ಪ್ರಕಾರ, ಇಡೀ ನೈಸ್ ಯೋಜನೆಗೆ ಸಹಿ ಹಾಕಿದ್ದು, ಆಗಿನ ಮುಖ್ಯಮಂತ್ರಿಗಳಾದ ಹೆಚ್ ಡಿ ದೇವೇಗೌಡರು. ಅವರೇ ಈ ಯೋಜನೆ ತಂದವರು ಎಂದರು.

ಸದನ ಹಾಗೂ ಕೋರ್ಟ್ ಗಳಲ್ಲಿ ಹೋರಾಟ ಮಾಡಲಿ: ಈ ರಸ್ತೆಯಲ್ಲಿ ಅಕ್ರಮವಾಗಿದ್ದರೆ ಸ್ವತಃ ಕುಮಾರಸ್ವಾಮಿ ಅವರೇ ಮುಖ್ಯಮಂತ್ರಿಯಾಗಿದ್ದಾಗ ತನಿಖೆ ಮಾಡಿಸಬಹುದಿತ್ತು. ನಾವು ಯಾವುದೇ ಹಗರಣ ಮಾಡಿಲ್ಲ. ನಾವು ಈ ವಿಚಾರವನ್ನು ಸಕಾರಾತ್ಮಕವಾಗಿ ಪರಿಗಣಿಸುತ್ತೇವೆ. ಏನಾದರೂ ತಪ್ಪು ನಡೆದಿದ್ದರೆ ಅಗತ್ಯ ಕ್ರಮ ಕೈಗೊಳ್ಳುತ್ತೇವೆ. ಅನಗತ್ಯವಾಗಿ ನಾವು ದ್ವೇಷದ ರಾಜಕಾರಣ ಮಾಡುವುದಿಲ್ಲ. ಅಧಿಕಾರ ಇದ್ದಾಗ ಏನೂ ಮಾಡದೇ ಈಗ ಅಧಿಕಾರ ಹೋದ ನಂತರ ಮಾತನಾಡಿದರೆ ಏನು ಪ್ರಯೋಜನ?. ನಮಗೆ ರಾಜ್ಯ ಹಾಗೂ ಜನರ ಅಬಿವೃದ್ಧಿ ಮುಖ್ಯ. ಅವರು ನನ್ನ ಹೆಸರು ಹೇಳಿಕೊಳ್ಳಲಿ. ಯಾವ ಹಿನ್ನೆಲೆಯಲ್ಲಿ ಯಾರು ನನ್ನ ಬಗ್ಗೆ ಏನು ಹೇಳುತ್ತಾರೆ ಎಂಬುದು ನನಗೆ ಗೊತ್ತಿದೆ. ಕಾನೂನು ವಿರುದ್ಧವಾಗಿ ನಡೆದುಕೊಂಡಿದ್ದರೆ ಕಾನೂನು ಪ್ರಕಾರ ಸದನ ಹಾಗೂ ಕೋರ್ಟ್ ಗಳಲ್ಲಿ ಹೋರಾಟ ಮಾಡಲಿ’ ಎಂದು ತಿಳಿಸಿದರು.

ಮಾನವೀಯತೆ, ಸಂಸ್ಕೃತಿಗೆ ಧಕ್ಕೆ ತಂದಿವೆ:ಮಣಿಪುರದ ದುರ್ಘಟನೆ ಬಗ್ಗೆ ಕೇಳಿದಾಗ, ‘ಇದು ಅತ್ಯಂತ ಹೇಯ ಹಾಗೂ ಆಘಾತಕಾರಿ ಬೆಳವಣಿಗೆ. ರಾಷ್ಟ್ರಪತಿಗಳು ಮಣಿಪುರ ಸರ್ಕಾರವನ್ನು ವಜಾಗೊಳಿಸಬೇಕು. ಅಲ್ಲಿನ ಘಟನೆಗಳು ಇಡೀ ಮಾನವೀಯತೆ, ಸಂಸ್ಕೃತಿಗೆ ಧಕ್ಕೆ ತಂದಿವೆ. ಪ್ರಧಾನಮಂತ್ರಿಗಳು ಮಾತನಾಡಿರಬಹುದು. ಆದರೆ ಯಾವುದೇ ಕ್ರಮ ಜರುಗಿಸಿಲ್ಲ’ ಎಂದರು.

ಇದನ್ನೂ ಓದಿ:ಬಿಜೆಪಿ ಶಾಸಕರ ಅಮಾನತು ಯಾರ ಒತ್ತಡದಿಂದಲೂ ಮಾಡಿಲ್ಲ, ಅದು ಅತ್ಯಂತ ನೋವಿನ ನಿರ್ಧಾರ: ಸ್ಪೀಕರ್ ಸ್ಪಷ್ಟನೆ

ABOUT THE AUTHOR

...view details