ಬಾಗಲಕೋಟೆ:ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಬಾದಾಮಿ ಕ್ಷೇತ್ರದಲ್ಲಿ ತಮ್ಮ ಎರಡನೆಯ ದಿನದ ಪ್ರವಾಸ ಮುಂದುವರೆಸಿದ್ದಾರೆ.
ವಿವಿಧ ಯೋಜನೆಗಳಿಗೆ ಚಾಲನೆ ನೀಡಿ ಮಾತನಾಡಿ ಅವರು, ಬಾದಾಮಿಯಲ್ಲಿರುವ ಹಂಪಿ ವಿಶ್ವ ವಿದ್ಯಾಲಯದ ಶಿಲ್ಪ ಮತ್ತು ಚಿತ್ರ ಕಲಾ ಕೇಂದ್ರವನ್ನು ಎತ್ತಂಗಡಿ ಮಾಡಬಾರದು ಎಂದು ಸರ್ಕಾರವನ್ನು ಒತ್ತಾಯಿಸಿದರು. ಈ ಜಾಗದಲ್ಲಿ ಹೋಟೆಲ್ ನಿರ್ಮಿಸುವ ಪ್ರಸ್ತಾವನೆ ಕೈ ಬಿಡುವಂತೆ ಅವರು ಆಗ್ರಹಿಸಿದರು.
ನಂತರ ಕ್ಷೇತ್ರದಲ್ಲಿ ಪ್ರವಾಸೋದ್ಯಮ ಇಲಾಖೆಗೆ ಸೇರಿದ ಜಾಗ ಬೇರೆ ಕಡೆ ಇದೆ. ಅಲ್ಲಿ ಹೋಟೆಲ್ ನಿರ್ಮಿಸುವುದು ಸೂಕ್ತ ಎಂದು ಸಿದ್ದರಾಮಯ್ಯ ಅವರು ಪ್ರವಾಸೋದ್ಯಮ ಸಚಿವ ಸಿ.ಟಿ. ರವಿ ಅವರಿಗೆ ದೂರವಾಣಿ ಮೂಲಕ ಮಾತನಾಡಿ ತಿಳಿಸಿದರು.
ಉನ್ನತ ಶಿಕ್ಷಣ ಖಾತೆ ಹೊಂದಿರುವ ಉಪ ಮುಖ್ಯಮಂತ್ರಿ ಅಶ್ವತ್ಥ ನಾರಾಯಣ ಅವರೊಂದಿಗೂ ದೂರವಾಣಿ ಮೂಲಕ ಮಾತನಾಡಿದ ಸಿದ್ದರಾಮಯ್ಯ ಅವರು, ಕೇಂದ್ರದ ಸಿಬ್ಬಂದಿಗೆ ವೇತನ ವಿತರಣೆಯಲ್ಲಿ ಆಗಿರುವ ವಿಳಂಬದ ಕುರಿತು ಗಮನ ಹರಿಸುವಂತೆ ತಿಳಿಸಿದರು.