ಬೆಂಗಳೂರು: "ಹೆಚ್ಚುವರಿ ಡಿಸಿಎಂ ಹುದ್ದೆಯ ಬಗ್ಗೆ ಮಾಧ್ಯಮಗಳ ಮುಂದೆ ಮಾತನಾಡುವವರು ಹೈಕಮಾಂಡ್ ಬಳಿ ಮಾತನಾಡಿ, ಪರಿಹಾರ ತರಲಿ" ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ತಿರುಗೇಟು ನೀಡಿದ್ದಾರೆ.
ಕೆಂಪೇಗೌಡರ ಜಯಂತಿ ಅಂಗವಾಗಿ ವಿಧಾನಸೌಧ ಮುಂಭಾಗ ಇರುವ ಕೆಂಪೇಗೌಡರ ಪ್ರತಿಮೆಗೆ ಪುಷ್ಪನಮನ ಸಲ್ಲಿಸಿ ಬಳಿಕ ಮಾತನಾಡಿದ ಅವರು, ಡಿಸಿಎಂ ಹುದ್ದೆ ಸೃಷ್ಟಿ ಒತ್ತಾಯ ವಿಚಾರವಾಗಿ ಪ್ರತಿಕ್ರಿಯಿಸಿ, "ಮಾಧ್ಯಮಗಳ ಮುಂದೆ ಮಾತನಾಡುವವರು ಹೈಕಮಾಂಡ್ ಮುಂದೆ ಮಾತನಾಡಲಿ. ಏನು ಬೇಕಾದರೂ ಪರಿಹಾರ ಪಡೆದುಕೊಂಡು ಬರಲಿ. ಮಾಧ್ಯಮದ ಮುಂದೆ ಚರ್ಚೆ ಮಾಡುವ ಅವಶ್ಯಕತೆ ಇಲ್ಲ. ಮಾಧ್ಯಮದವರು ಪರಿಹಾರ ಕೊಡುವುದಿಲ್ಲ. ಮಾಧ್ಯಮದವರು ಪ್ರಚಾರ ಕೊಡುತ್ತೀರ ಅಷ್ಟೇ. ಏನೇ ಇದ್ದರೂ ಹೈಕಮಾಂಡ್ ಮುಂದೆ ಹೋಗಿ ಮಾತನಾಡಿ ಪರಿಹಾರ ತೆಗೆದುಕೊಂಡು ಬರಲಿ" ಎಂದು ತಿರುಗೇಟು ನೀಡಿದರು.
ಕೆಪಿಸಿಸಿ ಅಧ್ಯಕ್ಷ ಸ್ಥಾನ ಬದಲಾವಣೆ ಒತ್ತಾಯ ಸಂಬಂಧ ಪ್ರತಿಕ್ರಿಯಿಸಿ, ಬಹಳ ಸಂತೋಷ, ಟೈಮ್ ವೇಸ್ಟ್ ಮಾಡಬಾರದು. ಏನೇನು ಬೇಕು ಹೈಕಮಾಂಡ್ ಮುಂದೆ ಹೋಗಿ ಪರಿಹಾರ ಪಡೆಯಲಿ. ಎಲ್ಲೆಲ್ಲಿ ಬೇಕೋ ಅಲ್ಲಲ್ಲಿ ಹೋಗಿ ಪರಿಹಾರ ಪಡೆಯಲಿ. ಡಾಕ್ಟರ್ ಬಳಿ ಹೋದರೆ ಔಷಧಿ ಕೊಡುತ್ತಾರೆ. ಲಾಯರ್ ಬಳಿ ಹೋದರೆ ನ್ಯಾಯ, ಪರಿಹಾರ ಕೊಡುತ್ತಾರೆ. ಎಲ್ಲೆಲ್ಲಿ ಹೋಗಬೇಕು ಅಲ್ಲಿಗೆ ಹುಡುಕಿಕೊಂಡು ಹೋಗಲಿ. ಯಾರು ಬೇಕಾದರು ಹೋಗಲಿ. ನನ್ನದೇನು ಅಭ್ಯಂತರ ಇಲ್ಲ" ಎಂದರು.
ಲೋಪವಾಗಿದೆ, ಮುಂದೆ ಸರಿಪಡಿಸೋಣ: ಕೆಂಪೇಗೌಡ ಜಯಂತಿಯ ಆಹ್ವಾನ ಪತ್ರಿಕೆಯಲ್ಲಿ ಹೆಚ್.ಡಿ. ದೇವೇಗೌಡರು ಹಾಗೂ ಕುಮಾರಸ್ವಾಮಿ ಹೆಸರು ಕೈಬಿಟ್ಟಿರುವ ವಿಚಾರವಾಗಿ ಪ್ರತಿಕ್ರಿಯಿಸಿ, "ರಾಜಕಾರಣ ಮಾಡುವವರು ರಾಜಕಾರಣ ಮಾಡುತ್ತಾರೆ. ನಾವು ಯಾರಿಗೂ ಅಗೌರವ ಕೊಡುವ ಅಗತ್ಯ ಇಲ್ಲ. ಎಸ್.ಎಂ. ಕೃಷ್ಣ ಇದ್ದಾರೆ. ಸದನಾಂದ ಗೌಡರು ಇದ್ದಾರೆ. ದೇವೇಗೌಡರು ಇದ್ದಾರೆ. ಕುಮಾರಸ್ವಾಮಿಯವರೂ ಇದ್ದಾರೆ. ಸಮಾಜದವರನ್ನು ಸೇರಿಸಬೇಕಿತ್ತು. ಅಧಿಕಾರಿಗಳು ಪ್ರೊಟೋಕಾಲ್ ನೋಡಿದ್ದಾರೆ. ಅದರಂತೆ ಅವರ ಹೆಸರನ್ನು ಕೈಬಿಟ್ಟಿದ್ದಾರೆ. ದೇವೇಗೌಡರು ಹಾಸನ ಜಿಲ್ಲೆ ವ್ಯಾಪ್ತಿಗೆ ಬರುತ್ತಾರೆ. ಕುಮಾರಸ್ವಾಮಿ ಮಂಡ್ಯ ಜಿಲ್ಲೆ ಸಂಸದರಾಗಿದ್ದಾರೆ. ನಿರ್ಮಲಾ ಸೀತಾರಾಮನ್ ಬೆಂಗಳೂರಿನಿಂದ ಆಯ್ಕೆಯಾಗಿದ್ದು, ಅವರ ಹೆಸರು ಹಾಕಲಾಗಿದೆ" ಎಂದರು.
"ಹೆಸರು ಹಾಕಬಾರದು ಅಂತೇನಿಲ್ಲ, ಹಾಕಬೇಕು. ಮುಂದಿನ ದಿನಗಳಲ್ಲಿ ಅದನ್ನು ಸರಿಪಡಿಸೋಣ. ಇದರ ಜೊತೆಗೆ ಬೇರೆ ಸಮುದಾಯದ ಸ್ವಾಮಿಗಳನ್ನೂ ಕರೆಯಬೇಕಿತ್ತು. ಕೆಂಪೇಗೌಡರು ಬರೀ ಒಕ್ಕಲಿಗರ ಆಸ್ತಿಯಲ್ಲ. ಅವರು ಎಲ್ಲಾ ಸಮಾಜದ ಆಸ್ತಿಯಾಗಿದ್ದಾರೆ. ಏನೋ ಲೋಪವಾಗಿದೆ. ಮುಂದೆ ಸರಿಪಡಿಸೋಣ" ಎಂದು ಡಿಕೆಶಿ ತಿಳಿಸಿದರು.
ದೆಹಲಿ ಭೇಟಿ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, "ಹೊಸದಾಗಿ ಸಂಸದರು ಆಯ್ಕೆಯಾಗಿದ್ದಾರೆ. ಅವರ ಜೊತೆ ಚರ್ಚೆ ಮಾಡುತ್ತೇವೆ. ರಾಜ್ಯದ ಬಾಕಿ ಯೋಜನೆಗಳ ಬಗ್ಗೆ ಚರ್ಚೆ ನಡೆಸುತ್ತೇವೆ. ಈಗಲಾದರೂ ನಮ್ಮ ಸಂಸದರು ಬಾಯಿಬಿಟ್ಟು ರಾಜ್ಯದ ಪರ ಹೋರಾಟ ಮಾಡಲಿ. ಬಾಕಿ ಯೋಜನೆಗಳ ಬಗ್ಗೆ ಸಂಸದರ ಗಮನಕ್ಕೆ ತರುತ್ತೇವೆ" ಎಂದು ಹೇಳಿದರು.
ಇದನ್ನೂ ಓದಿ: ನಾನು ಡಿಸಿಎಂ ಆಕಾಂಕ್ಷಿಯಲ್ಲ ಎಂದ ಮುನಿಯಪ್ಪ: ಚೆಲುವರಾಯಸ್ವಾಮಿ, ದಿನೇಶ್ ಗುಂಡೂರಾವ್ ಹೇಳಿದ್ದೇನು? - Demand For More DCMs