ಕರ್ನಾಟಕ

karnataka

Cristiano Ronaldo: ಕ್ರಿಶ್ಚಿಯಾನೊ ರೊನಾಲ್ಡೊ ಕಂಡು ನೆಲಕ್ಕೆ ಕುಸಿದು ಸಂಭ್ರಮಿಸಿದ ಅಪ್ಪಟ ಅಭಿಮಾನಿ: ವಿಡಿಯೋ

By

Published : Jun 18, 2023, 2:06 PM IST

ಎದುರಾಳಿ ತಂಡದ ಅಭಿಮಾನಿಗಳೂ ಪೋರ್ಚುಗಲ್​ ಫುಟ್ಬಾಲ್​ ತಾರೆ ಕ್ರಿಶ್ಚಿಯಾನೊ ರೊನಾಲ್ಡೊಗೆ ಫಿದಾ ಆಗದೇ ಇರಲು ಸಾಧ್ಯವಿಲ್ಲ. ಬೋಸ್ನಿಯಾದ ಅಪ್ಪಟ ಅಭಿಮಾನಿಯೊಬ್ಬ ರೊನಾಲ್ಡೊರನ್ನು ಕೊನೆಗೂ ಭೇಟಿಯಾಗಿ ಸಂಭ್ರಮಿಸಿದ್ದಾನೆ.

ಕ್ರಿಶ್ಚಿಯಾನೊ ರೊನಾಲ್ಡೊ
ಕ್ರಿಶ್ಚಿಯಾನೊ ರೊನಾಲ್ಡೊ

ತನ್ನ ಕಾಲ್ಚಳಕದಿಂದಲೇ ಬೆರಗು ಮೂಡಿಸುವ ತಾರಾ ಫುಟ್ಬಾಲ್​ ಆಟಗಾರ ಕ್ರಿಸ್ಟಿಯಾನೋ ರೊನಾಲ್ಡೊಗೆ ವಿಶ್ವಾದ್ಯಂತ ಕೋಟ್ಯಂತರ ಅಭಿಮಾನಿಗಳಿದ್ದಾರೆ. ಆತನ ಫ್ಯಾನ್​ ಫಾಲೋವಿಂಗ್​ ಎಲ್ಲರಿಗಿಂತ ಮಿಗಿಲು. ಆತನನ್ನು ನೋಡಲು ಅದೆಷ್ಟೋ ಅಭಿಮಾನಿಗಳು ಚಾತಕ ಪಕ್ಷಿಯಂತೆ ಕಾಯುತ್ತಿರುತ್ತಾರೆ. ಅಂಥದ್ದೇ ಅಪ್ಪಟ ಅಭಿಮಾನಿಯೊಬ್ಬನ ಆಸೆ ತೀರಿದೆ. ಅದೆಷ್ಟೋ ದಿನಗಳಿಂದ ಭೇಟಿಗಾಗಿ ಕಾದಿದ್ದ ಯೂಟ್ಯೂಬ್​ ಸ್ಟಾರ್​ ಸ್ಪೀಡ್ ಎಂಬಾತ ರೊನಾಲ್ಡೊರನ್ನು ಕೊನೆಗೂ ದರ್ಶಿಸಿದ್ದಾರೆ.

ರೊನಾಲ್ಡೊರನ್ನು ಭೇಟಿ ಮಾಡುವುದಕ್ಕಾಗಿ ಕಾದಿದ್ದ ಸ್ಪೀಡ್​ ಬೋಸ್ನಿಯಾ ಫುಟ್ಬಾಲ್​ ತಂಡದ ಅಭಿಮಾನಿಯೂ ಹೌದು. ಭೇಟಿಗೂ ಇದಕ್ಕೂ ಮೊದಲು ಪೋರ್ಚುಗಲ್​ ತಂಡ ಬೋಸ್ನಿಯಾ ವಿರುದ್ಧ 3-0 ಅಂತರದಲ್ಲಿ ಗೆಲುವು ಸಾಧಿಸಿತ್ತು. ಎದುರಾಳಿ ತಂಡದ ಅಭಿಮಾನಿಯಾಗಿದ್ದರೂ ರೊನಾಲ್ಡೊರನ್ನು ಭೇಟಿ ಮಾಡುವ ಮಹದಾಸೆಯನ್ನು ಸ್ಪೀಡ್​ ಹೊಂದಿದ್ದ.

ಇದಕ್ಕಾಗಿ ಕ್ರೀಡಾಂಗಣದ ಹೊರಗೆ ಕಾದಿದ್ದ ಸ್ಪೀಡ್​, ಕಾರಿನಿಂದ ಇಳಿದು ಬಂದ ರೊನಾಲ್ಡೊರನ್ನು ಕಂಡು ಪುಳಕಿತರಾದರು. ನೆಲಕ್ಕೆ ಬಾಗಿದ ಆತ 'ಓ ಮೈ ಗಾಡ್ ಐ ಲವ್ ಯೂ' ಎಂದು ಕೂಗಲಾರಂಭಿಸಿದ. ಸೆಲ್ಫಿ ತೆಗೆದುಕೊಂಡು ಸಂಭ್ರಮಿಸಿದ. ಬಳಿಕ ಫಾರ್ವರ್ಡ್‌ ಆಟಗಾರನ ಟ್ರೇಡ್​ಮಾರ್ಕ್​ ಆಗಿರುವ ಮೇಲಕ್ಕೆ ಜಿಗಿದು ಕೈಗಳೆರಡನ್ನು ಹಿಂದಕ್ಕೆ ಮಾಡುವ ಭಂಗಿಯನ್ನು ಮಾಡುವ ಮೂಲಕ ಸಂಭ್ರಮಿಸಿದ್ದಾನೆ.

ಅಭಿಮಾನಿಯ ಈ ಮಿತಿಯಿಲ್ಲದ ಸಂಭ್ರಮ ಕಂಡು ಅಂಗರಕ್ಷಕರು ತುಸು ಆತಂಕಕ್ಕೆ ಒಳಗಾಗಿದ್ದರು. ಆದರೂ, ಆತನ ಬಯಕೆಯನ್ನು ಈಡೇರಿಸುವ ಸಲುವಾಗಿ ಯಾವುದೇ ನಿರ್ಬಂಧ ವಿಧಿಸಲಿಲ್ಲ. ರೊನಾಲ್ಡೊ ಕೂಡ ಅಭಿಮಾನಿಯನ್ನು ತಬ್ಬಿಕೊಂಡರು. 'ತಿಂಗಳುಗಳ ಪ್ರಯತ್ನದ ನಂತರ ನನ್ನ ಆರಾಧ್ಯದೈವ ಆಟಗಾರನನ್ನು ಭೇಟಿಯಾದೆ' ಎಂದು ಆತ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾನೆ.

ಕಳೆದ ವರ್ಷ ರೊನಾಲ್ಡೊ ಆಟವನ್ನು ವೀಕ್ಷಿಸಲು ಅಮೆರಿಕದಿಂದ ಇಂಗ್ಲೆಂಡ್​ಗೆ ಬಂದಿದ್ದ ಸ್ಪೀಡ್ ​ಬೋಸ್ನಿಯಾ ನಿರಾಸೆ ಅನುಭವಿಸಿದ್ದ. ಅನಾರೋಗ್ಯದ ಕಾರಣ ರೊನಾಲ್ಡೊ ಅಂದಿನ ಪಂದ್ಯದಿಂದ ಹೊರಗುಳಿದಿದ್ದರು. ಇದೀಗ ಆತನನ್ನು ನೇರ ಭೇಟಿ ಮಾಡಿರುವುದು ಸಂಭ್ರಮ ಇಮ್ಮಡಿಗೊಳಿಸಿದೆ.

ಮೈದಾನಕ್ಕೆ ನುಗ್ಗಿ ರೊನಾಲ್ಡೊ ಎತ್ತಿಕೊಂಡ ಅಭಿಮಾನಿ:ಇದಕ್ಕೂ ಮೊದಲು ಅಭಿಮಾನಿಯೊಬ್ಬ ಆಟದ ಮಧ್ಯೆ ಮೈದಾನದೊಳಕ್ಕೆ ನುಗ್ಗಿ ಕ್ರಿಸ್ಟಿಯಾನೊ ರೊನಾಲ್ಡೊರನ್ನು ಎತ್ತಿಕೊಂಡು, ಕಾಲಿಗೆ ನಮಸ್ಕರಿಸಿ ಸಂಭ್ರಮಿಸಿದ ಘಟನೆ ಬೋಸ್ನಿಯಾ ಮತ್ತು ಪೋರ್ಚುಗಲ್​ ಪಂದ್ಯದಲ್ಲಿ ನಡೆದಿದೆ. ಪಂದ್ಯದಲ್ಲಿ ಪೋರ್ಚುಗಲ್​ ತಂಡ ಬೋಸ್ನಿಯಾ ವಿರುದ್ಧ 3-0 ಯಿಂದ ಗೆಲುವು ಸಾಧಿಸಿತು.

ಪಂದ್ಯದ ಮಧ್ಯೆಯೇ ಮೈದಾನಕ್ಕೆ ನುಗ್ಗಿ ಬಂದ ಅಭಿಮಾನಿಯೊಬ್ಬ ರೊನಾಲ್ಡೊರನ್ನು ಎತ್ತಿಕೊಂಡು ಸಂಭ್ರಮಿಸಿದ್ದಾನೆ. ಅಲ್ಲದೇ, ಕಾಲಿಗೆ ನಮಸ್ಕರಿಸಿ ಗೌರವ ಸಲ್ಲಿಸಿದ್ದಾನೆ. ಅಭಿಮಾನಿಯ ಈ ನಡೆಯಿಂದ ಆತಂಕ ತಂದರೂ ರೊನಾಲ್ಡೊ ಆತನ ಸಂಭ್ರಮಕ್ಕೆ ಸಾಥ್​ ನೀಡಿದರು. ಇದಾದ ಬಳಿಕ ಭದ್ರತಾ ಸಿಬ್ಬಂದಿ ಆ ಅಭಿಮಾನಿಯನ್ನು ಕರೆದೊಯ್ದಿದ್ದಾರೆ.

ಪಂದ್ಯ ಮುಗಿದ ಬಳಿಕ ಕ್ರಿಶ್ಚಿಯಾನೊ ರೊನಾಲ್ಡೊ ಇನ್​ಸ್ಟಾಗ್ರಾಮ್​ನಲ್ಲಿ ಜಯದ ಬಗ್ಗೆ ಬರೆದುಕೊಂಡಿದ್ದಾರೆ. ತಂಡಕ್ಕೆ ಸಿಕ್ಕ ಅದ್ಭುತ ಗೆಲುವು. ನಮ್ಮನ್ನು ಬೆಂಬಲಿಸಿದ ಎಲ್ಲ ಅಭಿಮಾನಿಗಳಿಗೆ ಧನ್ಯವಾದಗಳು ಎಂದು ಹೇಳಿದ್ದಾರೆ.

ಇದನ್ನೂ ಓದಿ:Wrestlers Protest: 'ಸಾಕ್ಷಿ ಮಲಿಕ್ ಕಾಂಗ್ರೆಸ್ ಕೈಗೊಂಬೆ'- ಬಿಜೆಪಿ ಸಹ ಉಸ್ತುವಾರಿ ಬಬಿತಾ ಫೋಗಟ್ ಗಂಭೀರ ಆರೋಪ

ABOUT THE AUTHOR

...view details