ಬೆಂಗಳೂರು: ಟಿ20 ವಿಶ್ವಕಪ್ 2024ರ ಅಂತಿಮ ಹಣಾಹಣಿಗಾಗಿ ಭಾರತ ಮತ್ತು ದಕ್ಷಿಣ ಆಫ್ರಿಕಾ ತಂಡಗಳು ಸಜ್ಜಾಗಿವೆ. ಉಭಯ ತಂಡಗಳು ಇಂದು ಬ್ರಿಡ್ಜ್ಟೌನ್ನ ಕೆನ್ಸಿಂಗ್ಟನ್ ಓವಲ್ ಮೈದಾನದಲ್ಲಿ ಮುಖಾಮುಖಿಯಾಗುತ್ತಿವೆ.
ಆದರೆ ಫೈನಲ್ ಪಂದ್ಯಕ್ಕೆ ವರುಣ ಅಡ್ಡಿಪಡಿಸುವ ಭೀತಿ ಎದುರಾಗಿದೆ. ಟೂರ್ನಿಯ ಕೆಲ ಪಂದ್ಯಗಳು ಮಳೆಯಿಂದಾಗಿ ರದ್ದಾಗಿದ್ದು, ಇಂದಿನ ಪಂದ್ಯಕ್ಕೂ ಮಳೆಯ ಭೀತಿ ಎದುರಾಗಿದೆ. ಉಷ್ಣವಲಯದ ಚಂಡಮಾರುತದ ಪರಿಣಾಮದಿಂದ ಇಂದು ಬಾರ್ಬಡೋಸ್ ದ್ವೀಪದಲ್ಲಿ ದಿನವಿಡೀ ಮಳೆಯಾಗುವ ನಿರೀಕ್ಷೆಯಿದೆ ಎಂದು ವರದಿಯಾಗಿದೆ. ಅದಾಗ್ಯೂ ಸಹ ಪಂದ್ಯದ ವೇಳೆಗೆ ಮಳೆ ಬಾಧಿಸದೆಯೂ ಇರಬಹುದು ಎಂದು ಅಂದಾಜಿಸಲಾಗಿದೆ. ಒಂದು ವೇಳೆ ಇಂದು ಮಳೆಯಿಂದಾಗಿ ಪಂದ್ಯ ರದ್ದಾದರೆ ಮುಂದಿನ ಆಯ್ಕೆಗಳೇನು ಎಂಬ ವಿವರ ಹೀಗಿದೆ.
ಟಿ20 ವಿಶ್ವಕಪ್ ಫೈನಲ್ ಪಂದ್ಯಕ್ಕೆ ಮೀಸಲು ದಿನವಿರಲಿದೆ. ಪಂದ್ಯಕ್ಕೆ ಮಳೆ ಬಾಧಿಸಿದರೆ 190 ನಿಮಿಷಗಳ ಹೆಚ್ಚುವರಿ ಸಮಯ ನಿಗದಿಯಾಗಿರುತ್ತದೆ. ಹೆಚ್ಚುವರಿ ಸಮಯ ವಿಸ್ತರಣೆಯ ಬಳಿಕವೂ ಮಳೆಯಿಂದಾಗಿ ಇಂದಿನ ಪಂದ್ಯ ರದ್ದಾದರೆ (ಉಭಯ ತಂಡಗಳು ಕನಿಷ್ಠ 10 ಓವರ್‌ಗಳು ಆಡಲು ಸಾಧ್ಯವಾಗದೇ) ಭಾನುವಾರ ಪಂದ್ಯಕ್ಕೆ ಮೀಸಲು ದಿನವಾಗಲಿದೆ. ಇಂದಿನ ಪಂದ್ಯ ಎಲ್ಲಿ ನಿಂತಿರುತ್ತದೆಯೋ ಅಲ್ಲಿಂದಲೇ ಮೀಸಲು ದಿನದ ಪಂದ್ಯಾಟ ಮುಂದುವರೆಯುತ್ತದೆ. ಒಂದು ವೇಳೆ ಮೀಸಲು ದಿನವೂ ಸಹ ಮಳೆಯಿಂದಾಗಿ ಸಂಪೂರ್ಣ ಪಂದ್ಯ ರದ್ದಾದರೆ ಎರಡೂ ತಂಡಗಳನ್ನ ಜಂಟಿ ವಿಜೇತರು ಎಂದು ಘೋಷಿಸಲಾಗುತ್ತದೆ.
ಅಕ್ಯುವೆದರ್ ವರದಿಯ ಪ್ರಕಾರ, ಬಾರ್ಬಡೋಸ್‌ನಲ್ಲಿ ಪಂದ್ಯದ ದಿನ ಗುಡುಗು ಸಹಿತ ಶೇ 75ರಷ್ಟು ಬಾರಿ ಮಳೆಯಾಗುವ ಸಾಧ್ಯತೆ ಇದೆ. ಪಂದ್ಯ ಆರಂಭದ ವೇಳೆ ಶೇ.30ರಷ್ಟು ಮಳೆ ಬೀಳಲಿದ್ದು, 1 ಗಂಟೆಗೆ ಮತ್ತೆ ಶೇ.50ರಷ್ಟು ಮಳೆಯಾಗಲಿದೆ ಎಂದು ವರದಿ ಹೇಳಿದೆ.