ದುಬೈ :ಭಾರತ ತಂಡದ ಆರಂಭಿಕ ಬ್ಯಾಟರ್ ಕೆ ಎಲ್ ರಾಹುಲ್ ಐಸಿಸಿ ಟಿ-20 ಬ್ಯಾಟಿಂಗ್ ಶ್ರೇಯಾಂಕದಲ್ಲಿ 4ನೇ ಸ್ಥಾನ ಉಳಿಸಿಕೊಂಡಿದ್ದರೆ, ಮಾಜಿ ನಾಯಕ ವಿರಾಟ್ ಕೊಹ್ಲಿ 10ನೇ ಸ್ಥಾನದಲ್ಲಿದ್ದಾರೆ.
ಬುಧವಾರ ಐಸಿಸಿ ಬಿಡುಗಡೆ ಮಾಡಿರುವ ನೂತನ ಟಿ-20 ಶ್ರೇಯಾಂಕದಲ್ಲಿ ಭಾರತದ ಯಾವುದೇ ಬೌಲರ್ ಅಗ್ರ 10 ಸ್ಥಾನಗಳಲ್ಲಿ ಅವಕಾಶ ಪಡೆಯುವಲ್ಲಿ ವಿಫಲರಾಗಿದ್ದಾರೆ. 21ನೇ ಸ್ಥಾನದಲ್ಲಿರುವ ವೇಗಿ ಭುವನೇಶ್ವರ್ ಕುಮಾರ್ ಭಾರತದ ಶ್ರೇಷ್ಠ ಶ್ರೇಯಾಂಕ ಹೊಂದಿರುವ ಬೌಲರ್ ಆಗಿದ್ದಾರೆ.
ಪಾಕಿಸ್ತಾನದ ಬ್ಯಾಟರ್ಗಳಾದ ಬಾಬರ್ ಅಜಮ್(805) ಮತ್ತು ಮೊಹಮ್ಮದ್ ರಿಜ್ವಾನ್(798) ಅಗ್ರ 2 ಸ್ಥಾನದಲ್ಲಿ ಮುಂದುವರೆದಿದ್ದಾರೆ. ಭಾರತ ತಂಡದ ನಾಯಕ ರೋಹಿತ್ ಶರ್ಮಾ11ನೇ ಸ್ಥಾನದಲ್ಲಿದ್ದಾರೆ.
ಶ್ರೀಲಂಕಾ ವಿರುದ್ಧ ಟಿ20 ಸರಣಿಯಲ್ಲಿ ಅದ್ಭುತ ಪ್ರದರ್ಶನ ತೋರಿರುವ ಆಸೀಸ್ ವೇಗಿ 4 ಸ್ಥಾನ ಮೇಲೇರಿ 2ಕ್ಕೆ ಬಡ್ತಿ ಪಡೆದರೆ, ಅಗ್ರಸ್ಥಾನದಲ್ಲಿದ್ದ ಶ್ರೀಲಂಕಾ ಆಲ್ರೌಂಡರ್ ವನಿಡು ಹಸರಂಗ 3ನೇ ಸ್ಥಾನಕ್ಕೆ ಕುಸಿದಿದ್ದಾರೆ. ದಕ್ಷಿಣ ಆಫ್ರಿಕಾದ ಸ್ಪಿನ್ನರ್ ತಬ್ರೈಜ್ ಶಮ್ಸಿ ಅಗ್ರಸ್ಥಾನದಲ್ಲಿ ಮುಂದುವರಿದಿದ್ದಾರೆ. ಆಲ್ರೌಂಡರ್ ರ್ಯಾಂಕಿಂಗ್ನಲ್ಲಿ ಆಫ್ಘಾನಿಸ್ತಾನದ ಮೊಹಮ್ಮದ್ ನಬಿ(265) ಅಗ್ರಸ್ಥಾನದಲ್ಲಿದ್ದಾರೆ.
ಏಕದಿನ ಶ್ರೇಯಾಂಕದಲ್ಲಿ ವಿರಾಟ್-ರೋಹಿತ್ 2-3ರಲ್ಲಿ ತಟಸ್ಥ :ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಏಕದಿನ ಬ್ಯಾಟಿಂಗ್ ಶ್ರೇಯಾಂಕದಲ್ಲಿ 2 ಮತ್ತು 3ನೇ ಸ್ಥಾನದಲ್ಲಿ ಮುಂದುವರಿದಿದ್ದಾರೆ. ಪಾಕಿಸ್ತಾನದ ನಾಯಕ ಬಾಬರ್ ಅಜಮ್ ಅಗ್ರಸ್ಥಾನ ಪಡೆದಿದ್ದಾರೆ.
ವಿಂಡೀಸ್ ವಿರುದ್ಧದ ಏಕದಿನ ಸರಣಿಯ 2ನೇ ಪಂದ್ಯದಲ್ಲಿ 64 ರನ್ಗಳಿಸಿದ್ದ ಸೂರ್ಯ ಅಗ್ರ 100ಕ್ಕೆ ಎಂಟ್ರಿಕೊಟ್ಟರೆ, ಕೊನೆಯ ಪಂದ್ಯದಲ್ಲಿ 80 ರನ್ಗಳಿಸಿದ್ದ ಶ್ರೇಯಸ್ ಅಯ್ಯರ್ 13 ಸ್ಥಾನ ಏರಿಕೆ ಕಂಡು 61ರಲ್ಲಿದ್ದಾರೆ. ವಿಕೆಟ್ ಕೀಪರ್ ಪಂತ್ 6 ಸ್ಥಾನ ಮೇಲೇರಿ 71ರಲ್ಲಿದ್ದಾರೆ.
ಇದನ್ನೂ ಓದಿ:ಆರ್ಸಿಬಿಗೆ ಆಘಾತಕಾರಿ ಸುದ್ದಿ ನೀಡಿದ ಗ್ಲೇನ್ ಮ್ಯಾಕ್ಸ್ವೆಲ್