ಸಿಡ್ನಿ(ಆಸ್ಟ್ರೇಲಿಯಾ):ಟೀಕೆಗಳನ್ನು ಮೆಟ್ಟಿನಿಂತು ಭರ್ಜರಿ ಪ್ರದರ್ಶನ ತೋರಿದ ಪಾಕಿಸ್ತಾನ ಆಸ್ಟ್ರೇಲಿಯಾದಲ್ಲಿ ನಡೆಯುತ್ತಿರುವ ಟಿ 20 ವಿಶ್ವಕಪ್ನಲ್ಲಿ ಮೊದಲ ತಂಡವಾಗಿ ಫೈನಲ್ ತಲುಪಿತು. ಸಿಡ್ನಿ ಮೈದಾನದಲ್ಲಿ ನಡೆದ ಮೊದಲ ಸೆಮಿಫೈನಲ್ನಲ್ಲಿ ನ್ಯೂಜಿಲ್ಯಾಂಡ್ ತಂಡವನ್ನು 7 ವಿಕೆಟ್ಗಳಿಂದ ಬಗ್ಗುಬಡಿದು ಪ್ರಶಸ್ತಿ ಸುತ್ತಿಗೆ ಪ್ರವೇಶ ಪಡೆಯಿತು.
ಗುಂಪು ಹಂತದಲ್ಲಿ ಭಾರತ, ಜಿಂಬಾಬ್ವೆ ವಿರುದ್ಧ ಸೋತಿದ್ದ ಪಾಕಿಸ್ತಾನ ಬಳಿಕ ಪುಟಿದೆದ್ದು ಫೈನಲ್ಗೆ ಅರ್ಹತೆ ಪಡೆದುಕೊಂಡಿತು. ಮೊದಲ ಸೆಮಿಫೈನಲ್ನಲ್ಲಿ ಗ್ರೂಪ್ 1 ರ ಅಗ್ರಸ್ಥಾನಿ ನ್ಯೂಜಿಲ್ಯಾಂಡ್ ವಿರುದ್ಧ ಭರ್ಜರಿ ಪ್ರದರ್ಶನ ತೋರಿತು. ಕಿವೀಸ್ ನೀಡಿದ್ದ 153 ರನ್ಗಳ ಗುರಿಯನ್ನು 19.1 ಓವರ್ನಲ್ಲಿ ಅನಾಯಾಸವಾಗಿ ತಲುಪಿತು.
ಬಾಬರ್, ರಿಜ್ವಾನ್ ಶೋ:ವಿಶ್ವಕಪ್ನಲ್ಲಿ ಹೀನಾಯ ಪ್ರದರ್ಶನ ನೀಡಿದ್ದ ಪಾಕಿಸ್ತಾನ ತಂಡದ ನಾಯಕ ಬಾಬರ್ ಅಜಂ ಮಹತ್ವದ ಪಂದ್ಯದಲ್ಲಿ ಭರ್ಜರಿ ಬ್ಯಾಟ್ ಬೀಸಿದರು. ವಿಕೆಟ್ ಕೀಪರ್ ಮೊಹಮದ್ ರಿಜ್ವಾನ್ ಜೊತೆ ಸೇರಿ ಮೊದಲ ವಿಕೆಟ್ಗೆ 105 ರನ್ಗಳ ಭದ್ರ ಬುನಾದಿ ಹಾಕಿ ಪಂದ್ಯ ಗೆಲ್ಲುವಂತೆ ಮಾಡಿದರು.
ಬಾಬರ್ ಅಜಂ 42 ಎಸೆತಗಳಲ್ಲಿ 7 ಬೌಂಡರಿಗಳ ಸಮೇತ 53 ರನ್ಗಳ ಅರ್ಧಶತಕ ಬಾರಿಸಿದರು. ತಂಡದ ಪ್ರಮುಖ ಬ್ಯಾಟರ್ ಮೊಹಮದ್ ರಿಜ್ವಾನ್ 43 ಎಸೆತಗಳಲ್ಲಿ 5 ಬೌಂಡರಿಗಳಿಂದ 57 ರನ್ ಮಾಡಿದರು. ಇಬ್ಬರೂ ಅರ್ಧಶತಕ ಸಿಡಿಸಿ ನ್ಯೂಜಿಲ್ಯಾಂಡ್ ಫೈನಲ್ ಆಸೆಯನ್ನು ನುಚ್ಚುನೂರು ಮಾಡಿದರು. ಇಬ್ಬರೂ ಔಟಾದ ಬಳಿಕ ಸಿಡಿದ ಮೊಹಮದ್ ಹ್ಯಾರೀಸ್ 30 ರನ್ ಗಳಿಸಿದರು.
ಮೌನವಾದ ಕಿವೀಸ್ ಬೌಲಿಂಗ್:ಮೊದಲು ಬ್ಯಾಟ್ ಮಾಡಿದ ನ್ಯೂಜಿಲ್ಯಾಂಡ್ 152 ರನ್ಗಳ ಸಾಧಾರಣ ಗುರಿ ನೀಡಿದಾಗಲೇ ಸೋಲಿನ ಭೀತಿ ಎದುರಾಗಿತ್ತು. ಗಾಯದ ಮೇಲೆ ಬರೆ ಎಳೆದಂತೆ ರಿಜ್ವಾನ್ ಮತ್ತು ಬಾಬರ್ ಅರ್ಧಶತಕ ಸಿಡಿಸಿದಾಗ ತಂಡ ಸೋಲೊಪ್ಪಿಕೊಂಡಿತು.