ನವದೆಹಲಿ: ಮಳೆ ಬಂದು ಕ್ರಿಕೆಟ್ ಪಂದ್ಯಕ್ಕೆ ಅಡ್ಡಿಯಾದಾಗ ಬಳಸುವ ಲೆಕ್ಕಾಚಾರದ ಗಣಿತವಾದ ಡಕ್ವರ್ಥ್ ಲೂಯಿಸ್ ಸ್ಟರ್ನ್ (ಡಿಎಲ್‌ಎಸ್ ನಿಯಮ) ವಿಧಾನದ ಶೋಧಕರಲ್ಲಿ ಒಬ್ಬರಾದ ಫ್ರಾಂಕ್ ಡಕ್ವರ್ಥ್ ಅವರು ವಯೋಸಹಜ ಕಾರಣಗಳಿಂದ ನಿಧನರಾಗಿದ್ದಾರೆ. ಜೂನ್ 21ರಂದು ಅವರು ಅಸುನೀಗಿದ್ದಾರೆ ಎಂದು ಕ್ರೀಡಾ ಸುದ್ದಿಸಂಸ್ಥೆಯೊಂದು ವರದಿ ಮಾಡಿದೆ.
ಇಂಗ್ಲಿಷ್ ಸಂಖ್ಯಾಶಾಸ್ತ್ರಜ್ಞರಾಗಿದ್ದ ಫ್ರಾಂಕ್ ಡಕ್ವರ್ಥ್ ಅವರಿಗೆ 84 ವರ್ಷ ವಯಸ್ಸಾಗಿತ್ತು. ಇಂಗ್ಲೆಂಡ್ನ ಲ್ಯಾಂಚೆಸ್ಟರ್ ನಿವಾಸಿಯಾಗಿದ್ದ ಅವರು ಉಪನ್ಯಾಸಕರಾಗಿದ್ದರು. ಇದೀಗ ವಯೋಸಹಜವಾಗಿ ಅಸುನೀಗಿದ್ದಾರೆ ಎಂದು ತಿಳಿದುಬಂದಿದೆ.
ಅಂತಾರಾಷ್ಟ್ರೀಯ ಕ್ರಿಕೆಟ್ ಸಮಿತಿ (ಐಸಿಸಿ) ಡಕ್ವರ್ಥ್ ನಿಧನಕ್ಕೆ ಸಂತಾಪ ಸೂಚಿಸಿದೆ. ಈ ನಿಯಮದ ಸಹಶೋಧಕರಾಗಿದ್ದ ಟೋನಿ ಲೂಯಿಸ್ 2020ರ ಏಪ್ರಿಲ್ನಲ್ಲಿ ಸಾವನ್ನಪ್ಪಿದ್ದಾರೆ.
ಡಕ್ವರ್ಥ್, ಲೂಯಿಸ್, ಸ್ಟರ್ನ್ ಯಾರು?: ಫ್ರಾಂಕ್ ಡಕ್ವರ್ಥ್, ಟೋನಿ ಲೂಯಿಸ್, ಸ್ವೀವನ್ ಸ್ಟರ್ನ್ ಕ್ರಿಕೆಟ್ನಲ್ಲಿ ಚಿರಕಾಲ ಉಳಿಯುವ ಹೆಸರುಗಳಾಗಿವೆ. ಇವರ ಗಣಿತದ ಸೂತ್ರಗಳು ಕ್ರಿಕೆಟ್ನಲ್ಲಿ ಅತ್ಯಮೂಲ್ಯವಾಗಿವೆ. ಮಳೆ ಬಂದಾಗ ಅಥವಾ ಯಾವುದೋ ಕಾರಣಕ್ಕೆ ಅಡಚಣೆ ಉಂಟಾದಾಗ ಪಂದ್ಯವನ್ನು ನಿಗದಿತ ಸಮಯದಲ್ಲೇ ಮುಗಿಸಲು ಬೇಕಾಗುವ ಲೆಕ್ಕಾಚಾರದ ಕಾಗುಣಿತವಾಗಿದೆ. ಡಿಎಲ್‌ಎಸ್ ನಿಯಮದ ಪ್ರಕಾರವೇ ತಂಡಕ್ಕೆ ಗುರಿ ನಿಗದಿ ಮಾಡಲಾಗುತ್ತದೆ. ಇದನ್ನು ರೂಪಿಸಿದ್ದೇ ಈ ಮೂವರು ಸಂಖ್ಯಾಶಾಸ್ತ್ರಜ್ಞರು.
ನಿಯಮ ಬಳಸಿದ್ದು ಯಾವಾಗ?: ಫ್ರಾಂಕ್ ಡಕ್ವರ್ಥ್ ಮತ್ತು ಟೋನಿ ಲೂಯಿಸ್ ಇಂಗ್ಲೆಂಡ್ನವರಾಗಿದ್ದು, ಮಳೆ ಬಾಧಿತ ಕ್ರಿಕೆಟ್ ಪಂದ್ಯಗಳ ನಿಯಮ ರೂಪಿಸಿದರು. ಈ ವಿಧಾನವನ್ನು 1997 ರಲ್ಲಿ ಮೊಟ್ಟ ಮೊದಲ ಬಾರಿಗೆ ಜಿಂಬಾಬ್ವೆ ಮತ್ತು ಇಂಗ್ಲೆಂಡ್ ನಡುವಣ ಪಂದ್ಯದಲ್ಲಿ ಡಕ್ವರ್ಥ್ ಲೂಯಿಸ್ ನಿಯಮ ಬಳಸಲಾಯಿತು. ಆ ಪಂದ್ಯದಲ್ಲಿ ಜಿಂಬಾಬ್ವೆ 7 ರನ್ಗಳಿಂದ ಜಯ ಗಳಿಸಿತ್ತು. ಇದಾದ ಬಳಿಕ 1999ರಿಂದ ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ) ಇದನ್ನು ಅಧಿಕೃತವಾಗಿ ಅಳಡಿಸಿಕೊಂಡಿತು.
ಮೊದಲು ಈ ನಿಯಮಗಳನ್ನು ಡಕ್ವರ್ಥ್ ಮತ್ತು ಲೂಯಿಸ್ ರೂಪಿಸಿದ್ದರು. ನಂತರ ಆಸ್ಟ್ರೇಲಿಯಾದ ಸ್ವೀವನ್ ಸ್ಟನ್ ಅವರು 2014ರಲ್ಲಿ ಈ ನಿಯಮಗಳನ್ನು ಪರಿಷ್ಕರಣೆ ಮಾಡಿದರು. ಇದು ಬಳಿಕ ಡಕ್ವರ್ಥ್ ಲೂಯಿಸ್ ಸ್ಟರ್ನ್ (ಡಿಎಲ್‌ಎಸ್) ನಿಯಮವಾಗಿ ಬದಲಾಯಿತು.
ಈ ನಿಯಮಕ್ಕೂ ಮೊದಲು ಮಳೆ ಅಡ್ಡಿ ಪಂದ್ಯಗಳಿಗೆ ಸರಾಸರಿ ರನ್ರೇಟ್ ವಿಧಾನ ಮತ್ತು ಮೋಸ್ಟ್ ಪ್ರೊಡಕ್ಟಿವ್ ಮೆಥಡ್ ಎಂಬ ನಿಯಮಗಳನ್ನು ಬಳಸುತ್ತಿದ್ದರು. ಈ ನಿಯಮಗ ಭಾರೀ ಗೊಂದಲದಿಂದ ಕೂಡಿದ್ದವು. 1992 ವಿಶ್ವಕಪ್ನಲ್ಲಿ ಇಂಗ್ಲೆಂಡ್ ಮತ್ತು ದಕ್ಷಿಣ ಆಫ್ರಿಕಾ ತಂಡಗಳ ನಡುವಿನ ಪಂದ್ಯದಲ್ಲಿ ಮಳೆ ಅಡಚಣೆ ಉಂಟುಮಾಡಿತ್ತು. ಆಫ್ರಿಕಾ ತಂಡಕ್ಕೆ ಗೆಲ್ಲಲು 13 ಎಸೆತಗಳಲ್ಲಿ 22 ರನ್ ಅಗತ್ಯವಿತ್ತು. 12 ನಿಮಿಷ ಪಂದ್ಯ ನಿಂತ ಕಾರಣ ನಿಯಮದಂತೆ 2 ಓವರ್ (12 ಎಸೆತ) ಕಡಿತಗೊಳಿಸಲಾಯಿತು. ಇದರಿಂದ ಆಫ್ರಿಕಾ 1 ಎಸೆತದಲ್ಲಿ 22 ರನ್ ಗಳಿಸಬೇಕಿತ್ತು. ಇದು ಅಸಾಧ್ಯವಾಗಿ ವಿವಾದಕ್ಕೂ ಕಾರಣವಾಗಿತ್ತು.
ಇದನ್ನೂ ಓದಿ: ಟಿ20 ವಿಶ್ವಕಪ್ನಿಂದ ಹೊರಬಿದ್ದ ಆಸ್ಟ್ರೇಲಿಯಾ: ಕ್ರಿಕೆಟ್ ವೃತ್ತಿ ಬದುಕಿಗೆ ವಾರ್ನರ್ ವಿದಾಯ - David Warner Retirement