ಹೈದರಾಬಾದ್: 2024ರ ಟಿ20 ವಿಶ್ವಕಪ್ನಲ್ಲಿ ಆಸ್ಟ್ರೇಲಿಯಾ ವಿರುದ್ಧದ ಸೂಪರ್ 8 ಪಂದ್ಯದ ವೇಳೆ ಭಾರತವು ಚೆಂಡನ್ನು ವಿರೂಪಗೊಳಿಸಿದೆ ಎಂದು ಪಾಕಿಸ್ತಾನದ ಮಾಜಿ ನಾಯಕ ಇಂಜಮಾಮ್ ಉಲ್ ಹಕ್ ಗಂಭೀರ ಆರೋಪ ಮಾಡಿದ್ದಾರೆ.
ಸೇಂಟ್ ಲೂಸಿಯಾದ ಡೇರೆನ್ ಸಾಮಿ ನ್ಯಾಷನಲ್ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ ಭಾರತವು 24 ರನ್ಗಳ ಭರ್ಜರಿ ಜಯ ಸಾಧಿಸಿತ್ತು. ಈ ಪಂದ್ಯದ ವೇಳೆಯಲ್ಲಿ ಚೆಂಡು ವಿರೂಪಗೊಳಿಸಲಾಗಿತ್ತು ಎಂದು ಆರೋಪಿಸಿರುವ ಹಕ್, 16ನೇ ಓವರ್ನಲ್ಲಿ ಅರ್ಷ್ದೀಪ್ ಅವರು ಎರಡನೇ ಸ್ಪೆಲ್ನ ಬೌಲಿಂಗ್ ಮಾಡಲು ಬಂದಾಗ ಈ ಘಟನೆ ಸಂಭವಿಸಿದೆ ಎಂದಿದ್ದಾರೆ. ಆ ಸಂದರ್ಭದಲ್ಲಿ ಚೆಂಡಿಗೆ ಏನೋ ಮಾಡಲಾಯಿತು. ಇದರಿಂದಾಗಿಯೇ ಭಾರತದ ಎಡಗೈ ವೇಗಿ ಅರ್ಷ್ದೀಪ್ ಸಿಂಗ್ ಆಸ್ಟ್ರೇಲಿಯಾದ ಇನ್ನಿಂಗ್ಸ್ನಲ್ಲಿ ರಿವರ್ಸ್ ಸ್ವಿಂಗ್ ಮಾಡಲು ಸಾಧ್ಯವಾಯಿತು ಎಂದು ಹೇಳಿದ್ದಾರೆ.
ಈ ಪಂದ್ಯದಲ್ಲಿ ಭಾರತದ ಪರ ಅರ್ಷ್ದೀಪ್ 37ಕ್ಕೆ 3 ವಿಕೆಟ್ ಪಡೆದು ಮಿಂಚಿದರು. ಅವರು ಇನ್ನಿಂಗ್ಸ್ ನ ಮೊದಲ ಓವರ್ನಲ್ಲಿ ಡೇವಿಡ್ ವಾರ್ನರ್ ಅವರನ್ನು ಔಟ್ ಮಾಡಿ, 18 ನೇ ಓವರ್ ನಲ್ಲಿ ಮ್ಯಾಥ್ಯೂ ವೇಡ್ ಮತ್ತು ಟಿಮ್ ಡೇವಿಡ್ ಅವರನ್ನು ಕೂಡ ಪವಿಲಿಯನ್ಗೆ ಕಳುಹಿಸಿದ್ದರು. ಆದರೆ ಅರ್ಷ್ದೀಪ್ ತನ್ನ ಎರಡು ಓವರ್ಗಳ ಎರಡನೇ ಸ್ಪೆಲ್ ಆರಂಭಿಸಿದಾಗ ಏನೋ ನಡೆದಿದೆ ಎಂದು ಇಂಜಮಾಮ್ ಹೇಳಿದ್ದು, ಇಂಥ ಘಟನೆಗಳ ಬಗ್ಗೆ ನಿಗಾ ವಹಿಸುವಂತೆ ಅವರು ಅಧಿಕಾರಿಗಳಿಗೆ ಒತ್ತಾಯಿಸಿದ್ದಾರೆ.
"ಅರ್ಷ್ದೀಪ್ ಸಿಂಗ್ 15ನೇ ಓವರ್ನಲ್ಲಿ ಬೌಲಿಂಗ್ ಮಾಡುತ್ತಿರುವಾಗಲೇ ಚೆಂಡು ರಿವರ್ಸ್ ಸ್ವಿಂಗ್ ಆಗುತ್ತಿತ್ತು ಎಂಬ ಅಂಶವನ್ನು ನೀವು ನಿರ್ಲಕ್ಷಿಸಲು ಸಾಧ್ಯವಿಲ್ಲ. ಅಷ್ಟು ಬೇಗನೆ ಹೊಸ ಚೆಂಡು ರಿವರ್ಸ್ ಸ್ವಿಂಗ್ ಆಗಲಾರಂಭಿಸುವುದು ಹೇಗೆ? 12 ರಿಂದ 13ನೇ ಓವರ್ ವೇಳೆಗೇ ಚೆಂಡು ರಿವರ್ಸ್ ಸ್ವಿಂಗ್ಗೆ ಸಿದ್ಧವಾಗಿತ್ತು. ಅಂಪೈರ್ಗಳು ಇಂಥ ವಿಷಯಗಳ ಬಗ್ಗೆ ಕಣ್ಣು ತೆರೆದು ನೋಡಬೇಕು. ರಿವರ್ಸ್ ಸ್ವಿಂಗ್ ಬಗ್ಗೆ ನಮಗೂ ಒಂದಿಷ್ಟು ಗೊತ್ತಿದೆ. ಅಂದರೆ ಅರ್ಷ್ದೀಪ್ ಸಿಂಗ್ಗೆ ಅಷ್ಟು ಬೇಗನೆ ರಿವರ್ಸ್ ಸ್ವಿಂಗ್ ಮಾಡಲು ಸಾಧ್ಯವಾಗಿದೆ ಎಂದಾದರೆ ಚೆಂಡಿಗೆ ಏನೋ ಮಾಡಲಾಗಿತ್ತು ಎಂದರ್ಥ" ಎಂದು ಇಂಜಮಾಮ್ ಪಾಕಿಸ್ತಾನದ 24 ನ್ಯೂಸ್ ಚಾನೆಲ್ನ 'ವಿಶ್ವಕಪ್ ಹಂಗಾಮಾ' ಕಾರ್ಯಕ್ರಮದಲ್ಲಿ ಹೇಳಿದರು.
ಸೂಪರ್ 8 ಪಂದ್ಯದ ವೇಳೆ ರೋಹಿತ್ ಶರ್ಮಾ ಕೇವಲ 41 ಎಸೆತಗಳಲ್ಲಿ 92 ರನ್ ಗಳಿಸಿದ್ದರಿಂದ ಭಾರತ 5 ವಿಕೆಟ್ ನಷ್ಟಕ್ಕೆ 205 ರನ್ ಗಳಿಸಿತು ಮತ್ತು ಸೂರ್ಯಕುಮಾರ್ ಯಾದವ್ ಚುರುಕಿನ ವೇಗದಲ್ಲಿ 31 ರನ್ ಗಳಿಸಿದರು. ಭಾರತೀಯ ಬೌಲರ್ಗಳು ಆಸ್ಟ್ರೇಲಿಯಾವನ್ನು 181/7 ಕ್ಕೆ ಸೀಮಿತಗೊಳಿಸಿದರು. ಭಾರತದ ಪರ ಅರ್ಷ್ದೀಪ್ 3 ವಿಕೆಟ್ ಮತ್ತು ಕುಲ್ದೀಪ್ 2 ವಿಕೆಟ್ ಪಡೆದಿದ್ದರು.
ಇದನ್ನೂ ಓದಿ : ಭಾರತದೊಂದಿಗೆ ಶಾಶ್ವತ ದ್ವೇಷ ಬಯಸುವುದಿಲ್ಲ: ಪಾಕಿಸ್ತಾನ ಉಪ ಪ್ರಧಾನಿ ಇಶಾಕ್ ದಾರ್ - India Pakistan Relations