ಕ್ವಿನ್ಸ್ಟೌನ್ (ನ್ಯೂಜಿಲ್ಯಾಂಡ್):ಗಾಯದ ಕಾರಣದಿಂದಾಗಿ ಪಾಕಿಸ್ತಾನ ತಂಡದ ನಾಯಕ ಬಾಬರ್ ಅಜಮ್ ನ್ಯೂಜಿಲ್ಯಾಂಡ್ ವಿರುದ್ಧದ ಟಿ-20 ಸರಣಿಯಿಂದ ಹೊರಬಿದ್ದಿದ್ದಾರೆ ಎಂದು ಪಾಕಿಸ್ತಾನ ಕ್ರಿಕೆಟ್ ಬೋರ್ಡ್ ಸ್ಪಷ್ಟಪಡಿಸಿದೆ.
ಪಾಕಿಸ್ತಾನ ಮತ್ತು ನ್ಯೂಜಿಲ್ಯಾಂಡ್ ನಡುವಿನ 3 ಪಂದ್ಯಗಳ ಟಿ20 ಸರಣಿ ಡಿಸೆಂಬರ್ 18ರಿಂದ ಆರಂಭವಾಗಲಿದೆ. ಸರಣಿ ಆರಂಭಕ್ಕೆ ಕೆಲ ದಿನಗಳು ಬಾಕಿಯಿರುವಾಗಲೇ, ಅಭ್ಯಾಸ ನಡೆಸುವ ವೇಳೆ ಬಾಬರ್ ಅಜಮ್ ಬಲಗೈ ಹೆಬ್ಬೆರಳಿಗೆ ಬಲವಾದ ಪೆಟ್ಟು ಬಿದ್ದಿದೆ. ಎಕ್ಸ್-ರೇ ಪರೀಕ್ಷೆಯಲ್ಲಿ ಹೆಬ್ಬೆರಳಿಗೆ ತೀವ್ರವಾಗಿ ಗಾಯವಾಗಿರುವುದು ದೃಢಪಟ್ಟಿದೆ. ಹೀಗಾಗಿ ಟಿ20 ಸರಣಿಯಿಂದ ಬಾಬರ್ ಅಜಮ್ ಹೊರಬಿದ್ದಿದ್ದಾರೆ.