ನವದೆಹಲಿ: ಸಾಮಾನ್ಯ ಅರ್ಹತಾ ಪರೀಕ್ಷೆ ನಡೆಸಲು 'ರಾಷ್ಟ್ರೀಯ ನೇಮಕಾತಿ ಸಂಸ್ಥೆ' ಸ್ಥಾಪಿಸಲು ಬುಧವಾರ ನಡೆದ ಕೇಂದ್ರ ಕ್ಯಾಬಿನೆಟ್ ಅನುಮೋದನೆ ನೀಡಿತು.
ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಪ್ರಧಾನಿ ಮೋದಿ, ಕೋಟ್ಯಂತರ ಯುವಕರಿಗೆ ರಾಷ್ಟ್ರೀಯ ನೇಮಕಾತಿ ಸಂಸ್ಥೆ ಸ್ಥಾಪನೆಯಿಂದ ವರದಾನವಾಗಲಿದೆ. ಸಾಮಾನ್ಯ ಅರ್ಹತಾ ಪರೀಕ್ಷೆಯು ಅನೇಕ ಪರೀಕ್ಷೆಗಳನ್ನು ತೆಗೆದುಹಾಕುತ್ತದೆ. ಪರಿಕ್ಷಾರ್ಥಿಗಳ ಅಮೂಲ್ಯ ಸಮಯ ಮತ್ತು ಸಂಪನ್ಮೂಲಗಳನ್ನು ಉಳಿಸುತ್ತದೆ. ಇದು ಪಾರದರ್ಶಕತೆಗೆ ದೊಡ್ಡ ಉತ್ತೇಜನ ನೀಡುತ್ತದೆ ಎಂದು ಶ್ಲಾಘಿಸಿದರು.
ಕೇಂದ್ರ ಸರ್ಕಾರದಲ್ಲಿ ಸುಮಾರು 20ಕ್ಕೂ ಹೆಚ್ಚು ನೇಮಕ ಏಜೆನ್ಸಿಗಳಿವೆ. ನಾವು ಈಗ ಕೇವಲ ಮೂರು ಏಜೆನ್ಸಿಗಳ ಪರೀಕ್ಷೆಗಳನ್ನು ಸಾಮಾನ್ಯವಾಗಿಸುತ್ತಿದ್ದೇವೆ. ಕಾಲಕ್ರಮೇಣ ಎಲ್ಲ ನೇಮಕಾತಿ ಏಜೆನ್ಸಿಗಳಿಗೆ ಸಾಮಾನ್ಯ ಅರ್ಹತಾ ಪರೀಕ್ಷೆಯನ್ನು ಒಂದೇ ಸೂರಿನಡಿ ನಡೆಸಲು ಕೇಂದ್ರ ಉದ್ದೇಶಿಸಿದೆ.
ಗೆಜೆಟೆಡ್ ಅಲ್ಲದ ಎಲ್ಲ ಹುದ್ದೆಗಳಿಗೆ ಒಂದೇ ಪ್ರವೇಶ ಪರೀಕ್ಷೆ ಇರುತ್ತದೆ. ಗ್ರೂಪ್ 'ಬಿ' ಮತ್ತು 'ಸಿ' ಹುದ್ದೆಗಳಿಗೆ ಅನ್ವಯಿಸಲಿದೆ. ಈ ಸಾಮಾನ್ಯ ಪ್ರವೇಶ ಪರೀಕ್ಷೆಗೆ (ಸಿಇಟಿ) ಅರ್ಹತೆ ಪಡೆದ ಅಭ್ಯರ್ಥಿಗಳು ಯಾವುದೇ ನೇಮಕಾತಿ ಸಂಸ್ಥೆಗಳಿಗೆ ಉನ್ನತ ಮಟ್ಟದ ಪರೀಕ್ಷೆಗೆ ಅರ್ಜಿ ಸಲ್ಲಿಸಬಹುದು. ಪಡೆದ ಅಂಕಗಳು ಮೂರು ವರ್ಷಗಳವರೆಗೆ ಮಾನ್ಯವಾಗಿರುತ್ತದೆ, ಈ ಸಮಯದಲ್ಲಿ ಅಭ್ಯರ್ಥಿಯು ಯೋಗ್ಯತೆ ಮತ್ತು ಆದ್ಯತೆಗಳನ್ನು ಅವಲಂಬಿಸಿ ವಿವಿಧ ಕ್ಷೇತ್ರಗಳಲ್ಲಿನ ಉದ್ಯೋಗಗಳಿಗೆ ಅರ್ಜಿ ಸಲ್ಲಿಸಬಹುದು. ಪ್ರಯತ್ನಗಳಿಗೆ ಯಾವುದೇ ನಿರ್ಬಂಧವಿರುವುದಿಲ್ಲ.