ಬೆಂಗಳೂರು: ತುರ್ತು ಸಂದರ್ಭಗಳಲ್ಲಿ ನೆರವಾಗಲು ಹಾಗೂ ಜನಸ್ನೇಹಿ ಪೊಲೀಸ್ ವಾತಾವರಣ ನಿರ್ಮಿಸಲು ನಗರ ಪೊಲೀಸರು ಮುಂದಾಗಿದ್ದು, ಕೆಎಸ್ಪಿ ಮೊಬೈಲ್ ಆ್ಯಪ್‌ಗೆ 'ಸೇಫ್ ಕನೆಕ್ಟ್' ಸೌಲಭ್ಯ ಕಲ್ಪಿಸಿದ್ದಾರೆ. ಇದರಿಂದ ಅಪಾಯದ ಸಂದರ್ಭಗಳಲ್ಲಿ ಜನರು ಆ್ಯಪ್ನಲ್ಲಿರುವ ಸುರಕ್ಷಿತ ಬಟನ್ ಒತ್ತಿ ಕರೆ ಮಾಡಿದರೆ, ತಕ್ಷಣವೇ ಕರೆ ಮಾಡಿದ ಸ್ಥಳದ ಲೈವ್ ಲೊಕೇಶನ್ ಕಮಾಂಡ್ ಸೆಂಟರ್ಗೆ ರವಾನೆಯಾಗುತ್ತದೆ.
ಈ ಹಿಂದೆ ನಗರದ ಹಲವೆಡೆ ನಿರ್ಮಿಸಲಾಗಿದ್ದ ಸೇಫ್ಟಿ ಐಲ್ಯಾಂಡ್‌ನಲ್ಲಿ ಸೇಫ್ಟಿ ಬಟನ್ ಒತ್ತಿದ ತಕ್ಷಣ ನೇರವಾಗಿ ಕಮಾಂಡ್ ಸೆಂಟರ್ ಅನ್ನು ಸಂಪರ್ಕಿಸುತ್ತಿತ್ತು. ಲೊಕೇಷನ್ ಆಧರಿಸಿ ಕೆಲವೇ ಕ್ಷಣಗಳಲ್ಲಿ ಹೊಯ್ಸಳ ಸಿಬ್ಬಂದಿ ಸ್ಥಳಕ್ಕೆ ತೆರಳಿ ಜನರ ದೂರುಗಳನ್ನು ಆಲಿಸುತ್ತಿದ್ದರು. ಇದೀಗ ಇನ್ನೊಂದು ಹೆಜ್ಜೆ ಮುಂದಿಟ್ಟಿರುವ ನಗರ ಪೊಲೀಸರು, ಪ್ರಚಲಿತದಲ್ಲಿರುವ ಕರ್ನಾಟಕ ರಾಜ್ಯ ಪೊಲೀಸ್ (ಕೆಎಸ್ಪಿ) ಆ್ಯಪ್‌ಗೆ ಸೇಫ್ ಕನೆಕ್ಟ್ ಬಟನ್ ಸೇರಿಸಿದ್ದಾರೆ.
ಸಂಕಷ್ಟ ಸಂದರ್ಭಗಳಲ್ಲಿ ಈ ಸೇಫ್ ಕನೆಕ್ಟ್ ಬಟನ್ ಒತ್ತಿದರೆ ನೇರವಾಗಿ ಪೊಲೀಸ್ ನಿಯಂತ್ರಣ ಕೊಠಡಿಗೆ ವಿಡಿಯೊ ಅಥವಾ ಆಡಿಯೊ ಕರೆ ಮಾಡಬಹುದು. ಈ ಮೂಲಕ ಸ್ವಯಂಚಾಲಿತವಾಗಿ ನೀವಿರುವ ಸ್ಥಳವನ್ನು ಪತ್ತೆ ಹಚ್ಚಿ ಕೆಲವೇ ಕ್ಷಣಗಳಲ್ಲಿ ನಿಮ್ಮ ಸಹಾಯಕ್ಕೆ ಹೊಯ್ಸಳ ಸಿಬ್ಬಂದಿ ಧಾವಿಸುತ್ತಾರೆ.
ಈ ಬಗ್ಗೆ ನಗರ ಪೊಲೀಸ್ ಆಯುಕ್ತ ಬಿ. ದಯಾನಂದ ಮಾತನಾಡಿ, "ಸೇಫ್ ಸಿಟಿ ಯೋಜನೆಯಡಿ ನಗರದೆಲ್ಲೆಡೆ ಈಗಾಗಲೇ ಸುಮಾರು 50 ಕಡೆಗಳಲ್ಲಿ ಸೇಫ್ಟಿ ಐಲ್ಯಾಂಡ್ ನಿರ್ಮಿಸಲಾಗಿದೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಹೆಚ್ಚಿಸಲಾಗುವುದು. ಗರಿಷ್ಟ ಮಟ್ಟದಲ್ಲಿ ಜನರಿಗೆ ನೆರವಾಗುವ ಸಲುವಾಗಿ ಕೆಎಸ್ಪಿ ಆ್ಯಪ್ನಲ್ಲಿ ಸೇಫ್ ಕನೆಕ್ಟ್ ಬಟನ್ ಲಿಂಕ್ ಕೊಡಲಾಗಿದೆ".
"ಈ ಬಟನ್ ಒತ್ತಿದರೆ ಕಮಾಂಡ್ ಸೆಂಟರ್ಗೆ ನೇರವಾಗಿ ವಿಡಿಯೊ ಕರೆಗೆ ಸಂಪರ್ಕಿಸುತ್ತದೆ. ಅಗತ್ಯ ಸಂದರ್ಭಗಳಲ್ಲಿ ಸಾರ್ವಜನಿಕರು ವಿಡಿಯೊ ಅಥವಾ ಆಡಿಯೊ ಕರೆ ಮಾಡಿದರೆ ಕೆಲವೇ ಕ್ಷಣಗಳಲ್ಲಿ ನೀವಿರುವ ಜಾಗಕ್ಕೆ ಪೊಲೀಸರು ಬರಲಿದ್ದಾರೆ. ಈ ರೀತಿಯ ಸೇವೆ ಸಲ್ಲಿಸುವ ದೇಶದ ಮೊದಲ ನಗರವಾಗಿ ಬೆಂಗಳೂರು ಹೊರಹೊಮ್ಮಿದೆ."
"ಸೇಫ್ ಕನೆಕ್ಟ್ ಸೌಲಭ್ಯವನ್ನು ಬೆಂಗಳೂರು ನಗರ ಪೊಲೀಸ್ ಕಮೀಷನರೇಟ್ ವ್ಯಾಪ್ತಿಯಲ್ಲಿರುವ ಸಾರ್ವಜನಿಕರು ಸದ್ಬಳಕೆ ಮಾಡಿಕೊಳ್ಳಬಹುದು. ಗೂಗಲ್ ಪ್ಲೇಸ್ಟೋರ್ಗೆ ಹೋಗಿ ಕೆಎಸ್ಪಿ ಆ್ಯಪ್ ಡೌನ್ ಲೋಡ್ ಮಾಡಿಕೊಂಡು ನೂತನ ಸೇವೆ ಪಡೆಯಬಹುದು" ಎಂದು ಅವರು ಮಾಹಿತಿ ನೀಡಿದರು.
ರಿಯಲ್ ಟೈಮ್ ಟ್ರ್ಯಾಂಕಿಂಗ್ ಆಫ್ ಹೊಯ್ಸಳ: "ಹೊಯ್ಸಳ ಸಿಬ್ಬಂದಿಯಲ್ಲಿ ಪಾರದರ್ಶಕತೆ ಹೆಚ್ಚಿಸಲು ಹಾಗೂ ನಾಗರಿಕರಿಗೆ ಮತ್ತಷ್ಟು ನೆರವಾಗಲು ನಗರ ಪೊಲೀಸ್ ಇಲಾಖೆ ರಿಯಲ್ ಟೈಮ್ ಟ್ರ್ಯಾಕಿಂಗ್ ವ್ಯವಸ್ಥೆಯನ್ನು ಹೊಸದಾಗಿ ಪರಿಚಯಿಸಿದೆ. ನಾಗರಿಕರು 112ಗೆ ಕರೆ ಮಾಡಿದಾಗ ಪೊಲೀಸ್ ನಿಯಂತ್ರಣ ಕಚೇರಿಯಲ್ಲಿ ದೂರು ಆಲಿಸಿ ಕೂಡಲೇ ಹತ್ತಿರದ ಹೊಯ್ಸಳ ಸಿಬ್ಬಂದಿಗೆ ಮಾಹಿತಿ ರವಾನಿಸಲಾಗುತ್ತಿತ್ತು. ಇದೀಗ ದೂರಿನ ಸಂಖ್ಯೆ ಹಾಗೂ ಟ್ರ್ಯಾಕಿಂಗ್ ಲಿಂಕ್ ಒಳಗೊಂಡಿರುವ ಸಂದೇಶವನ್ನು ದೂರುದಾರರ ಮೊಬೈಲ್ ನಂಬರ್ಗೆ ಕಳುಹಿಸಲಿದೆ. ನಾಗರಿಕರು ಟ್ರ್ಯಾಕಿಂಗ್ ಲಿಂಕ್ ಮಾಡಿ ಗೂಗಲ್ ಮ್ಯಾಪ್ನಲ್ಲಿ ಹೊಯ್ಸಳ ವಾಹನ ಬರುತ್ತಿರುವ ಸ್ಥಳ ಹಾಗೂ ಆಗಮನದ ಅಂದಾಜು ಸಮಯ ನೋಡುವ ವ್ಯವಸ್ಥೆ ಇದಾಗಿದೆ" ಎಂದು ಆಯುಕ್ತರು ತಿಳಿಸಿದ್ದಾರೆ.
ಇದನ್ನೂ ಓದಿ: ರಾಜ್ಯದ ವಿವಿಧೆಡೆ ಲೋಕಾಯುಕ್ತ ದಾಳಿ, ದಾಖಲೆಗಳ ಪರಿಶೀಲನೆ - Lokayukta Raid