ಬೆಂಗಳೂರು: ಸೆಲ್ಫಿ ವಿಡಿಯೋ ಮಾಡುತ್ತಿದ್ದ ಯುವತಿಯೊಂದಿಗೆ ಕಿಡಿಗೇಡಿಯೊಬ್ಬ ಅಸಭ್ಯವಾಗಿ ವರ್ತಿಸಿರುವ ಘಟನೆ ಬೆಂಗಳೂರಿನ ಬಿಟಿಎಂ ಲೇಔಟ್ನಲ್ಲಿ ನಡೆದಿದೆ. ಮಂಗಳವಾರ ರಾತ್ರಿ ಈ ಘಟನೆ ನಡೆದಿದ್ದು, ಅಪರಿಚಿತನ ಕಾಟದಿಂದ ಬೇಸತ್ತ ಯುವತಿ ವಿಡಿಯೋ ಮಾಡುವ ಮೂಲಕ ನಡೆದ ಘಟನೆಯನ್ನ ಇನ್ಸ್ಟಾಗ್ರಾಮ್ನಲ್ಲಿ ವಿವರಿಸಿ ಕಣ್ಣೀರಿಟ್ಟಿದ್ದಾಳೆ.
ತನ್ನ ಪಾಡಿಗೆ ತಾನು ವಿಡಿಯೋ ಮಾಡುತ್ತಾ ಹೋಗುತ್ತಿದ್ದ ಯುವತಿಯನ್ನ ಸೈಕಲ್ನಲ್ಲಿ ಬಂದ ಅಪರಿಚಿತನೊಬ್ಬ ಗಮನಿಸಿ ರೇಗಿಸಿದ್ದಾನೆ. ಬಳಿಕ ಪುನಃ ವಿರುದ್ಧ ದಿಕ್ಕಿನಿಂದ ವಾಪಸ್ ಬಂದು ಆಕೆಯ ಖಾಸಗಿ ಅಂಗ ಸ್ಪರ್ಶಿಸಿ ಅಸಭ್ಯವಾಗಿ ವರ್ತಿಸಿದ್ದಾನೆ. ತಕ್ಷಣ ಅಕ್ಕಪಕ್ಕದವರ ಸಹಾಯದಿಂದ ಆರೋಪಿಯನ್ನು ಹಿಡಿದ ಯುವತಿ, ಆತನನ್ನು ತರಾಟೆಗೆ ತೆಗೆದುಕೊಂಡಿದ್ದಾಳೆ. ಆದರೆ, ಕೆಲವರು ಆರೋಪಿ ಅಪ್ರಾಪ್ತ ಎಂದು ಪರಿಸ್ಥಿತಿ ತಿಳಿಗೊಳಿಸಿ ಕಳಿಸಿದ್ದಾರೆ. ತನಗೆ ಎದುರಾದ ಸನ್ನಿವೇಶದ ಕುರಿತು ಇನ್ಸ್ಟಾಗ್ರಾಮ್ನಲ್ಲಿ ವಿಡಿಯೋ ಪೋಸ್ಟ್ ಮಾಡಿರುವ ಯುವತಿ, ತನಗೆ ಅಸುರಕ್ಷಿತ ಭಾವನೆ ಕಾಡುತ್ತಿದೆ ಎಂದು ಕಣ್ಣೀರಿಟ್ಟಿದ್ದಾಳೆ.
ಸದ್ಯ ಈ ಬಗ್ಗೆ ಯಾವುದೇ ಅಧಿಕೃತ ದೂರು ದಾಖಲಾಗಿಲ್ಲ. ಆದರೆ, ಘಟನೆಯ ಕುರಿತು ಆಗ್ನೇಯ ವಿಭಾಗದ ಪೊಲೀಸರು ಮಾಹಿತಿ ಕಲೆಹಾಕುತ್ತಿದ್ದಾರೆ.