ಬೆಂಗಳೂರು: ಶತಮಾನದ ಇತಿಹಾಸ ಹೊಂದಿರುವ ಪ್ರತಿಷ್ಠಿತ ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಸ್ಥೆ (ಎಫ್‌ಕೆಸಿಸಿಐ) 2024-25ನೇ ಸಾಲಿನ ಅಧ್ಯಕ್ಷರಾಗಿ ಎಂ.ಜಿ.ಬಾಲಕೃಷ್ಣ ಅಧಿಕಾರ ವಹಿಸಿಕೊಂಡಿದ್ದಾರೆ.
ಎಂ.ಜಿ.ಬಾಲಕೃಷ್ಣ 1989ರಲ್ಲಿ ಸ್ವಂತ ಉದ್ಯಮ ಸ್ಥಾಪಿಸಿ ಯಶಸ್ಸು ಸಾಧಿಸುತ್ತ ಬಂದಿದ್ದಾರೆ. ಕಳೆದ 13 ವರ್ಷಗಳಿಂದ ಎಫ್‌ಕೆಸಿಸಿಐ ಉಪಾಧ್ಯಕ್ಷ, ಹಿರಿಯ ಉಪಾಧ್ಯಕ್ಷ ಸೇರಿದಂತೆ ವಿವಿಧ ಹುದ್ದೆಗಳು ಹಾಗೂ ಸಮಿತಿಯಲ್ಲಿ ಸಕ್ರಿಯವಾಗಿ ಕಾರ್ಯ ನಿರ್ವಹಿಸಿದ್ದಾರೆ. ರಾಷ್ಟ್ರ, ರಾಜ್ಯ ಹಾಗೂ ಅಂತಾರಾಷ್ಟ್ರೀಯ ಮಟ್ಟದ ಪ್ರಶಸ್ತಿಗಳು ಸಹ ಅವರಿಗೆ ಲಭಿಸಿವೆ. ಉತ್ತಮ ಸಂಘಟನಾಕಾರರಾಗಿ ಕೂಡ ಗುರುತಿಸಿಕೊಂಡಿದ್ದಾರೆ.
ಉಪಾಧ್ಯಕ್ಷೆಯಾಗಿ ಉಮಾ ರೆಡ್ಡಿ: ಎಫ್‌ಕೆಸಿಸಿಐ ವಿವಿಧ ಸಮಿತಿಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಉಮಾ ರೆಡ್ಡಿ ಹಿರಿಯ ಉಪಾಧ್ಯಕ್ಷೆಯಾಗಿ ಅಧಿಕಾರ ವಹಿಸಿಕೊಂಡಿದ್ದಾರೆ. ಇವರು ಕೂಡ ಎಫ್‌ಕೆಸಿಸಿಐನ ಹಲವಾರು ಸಮಿತಿಗಳ ಅಧ್ಯಕ್ಷರಾಗಿ, ಹಲವಾರು ಕಾರ್ಯಕ್ರಮಗಳ ಆಯೋಜಕಿಯಾಗಿ, ಅದರಲ್ಲೂ ಮಹಿಳಾ ಉದ್ಯಮಿಗಳಿಗೆ ಮಾರ್ಗದರ್ಶಕರಾಗಿ ಸೇವೆ ಸಲ್ಲಿಸಿದ್ದಾರೆ.
ಕಳೆದ 25 ವರ್ಷಗಳಿಂದ ಎಫ್‌ಕೆಸಿಸಿಐನ ವಿವಿಧ ಹುದ್ದೆಗಳಲ್ಲಿ ಕಾರ್ಯನಿರ್ವಹಿಸಿದ ಸಾಯಿರಾಂ ಪ್ರಸಾದ್ ಕೂಡ ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಎಪಿಎಂಸಿ ಸಮಿತಿಯ ನಿರ್ದೇಶಕರಾಗಿಯೂ ಅವರು ಸೇವೆ ಸಲ್ಲಿಸಿದ್ದಾರೆ.