ಬೆಂಗಳೂರು : ವಾಹನ ಚಾಲಕರಿಂದ ಹಣ ಸುಲಿಗೆ ಮಾಡಲು ಅಪಘಾತದ ನಾಟಕವಾಡುತ್ತಿದ್ದ ಆರೋಪಿಯನ್ನು ಜಯನಗರ ಠಾಣಾ ಪೊಲೀಸರು ಬಂಧಿಸಿದ್ದಾರೆ. ಜಮೀಲ್ ಬಂಧಿತ ಆರೋಪಿ. ದಾರಿಯಲ್ಲಿ ಹೋಗುವ ಕಾರು ಚಾಲಕರನ್ನೇ ಟಾರ್ಗೆಟ್ ಮಾಡುತ್ತಿದ್ದ ಆರೋಪಿ, ಬೇಕಂತಲೇ ತನ್ನ ದ್ವಿಚಕ್ರ ವಾಹನವನ್ನು ಕಾರಿಗೆ ಟಚ್ ಮಾಡುತ್ತಿದ್ದ. ನಂತರ ಆ ಕಾರನ್ನು ಅಡ್ಡಗಟ್ಟಿ 'ಅಪಘಾತವೆಸಗಿದ್ದೀರಿ, ಸರಿಪಡಿಸಲು ದುಡ್ಡು ಕೊಡಿ' ಅಂತಾ ಜಗಳವಾಡುತ್ತಿದ್ದ. ಹಣ ಕೊಡದೆ ಹೋದರೆ ಪೊಲೀಸರಿಗೆ ದೂರು ಕೊಡುವುದಾಗಿ, ಬಲಪ್ರಯೋಗದ ಮಾಡಿ ಬೆದರಿಸುತ್ತಿದ್ದ.
ಇದೇ ರೀತಿ ಕಾರು ಚಾಲಕರೊಬ್ಬರನ್ನು ಅಡ್ಡಗಟ್ಟಿ 30 ಸಾವಿರ ರೂ. ಪಡೆದುಕೊಂಡಿದ್ದ ಆರೋಪಿಯ ವಿರುದ್ಧ ಜಯನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಸದ್ಯ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಆರೋಪಿಯ ವಿರುದ್ಧ ರಾಜ್ಯದ ವಿವಿಧ ಠಾಣೆಗಳಲ್ಲಿ 17 ಪ್ರಕರಣ ದಾಖಲಾಗಿರುವುದು ತನಿಖೆ ವೇಳೆ ತಿಳಿದು ಬಂದಿದೆ ಎಂದು ಪೊಲೀಸರು ತಿಳಿಸಿದರು.
ಇದನ್ನೂ ಓದಿ: ಬೆಂಗಳೂರು: ಒಂದೇ ದಿನ 779 ಡ್ರಂಕ್ ಅಂಡ್ ಡ್ರೈವ್ ಪ್ರಕರಣ ದಾಖಲಿಸಿದ ಸಂಚಾರ ಪೊಲೀಸರು - DRUNK AND DRIVE CASES