ಉಳ್ಳಾಲ (ದಕ್ಷಿಣಕನ್ನಡ): ಇಲ್ಲಿನ ಬೀಚ್ಗೆ ವಿಹಾರಕ್ಕೆಂದು ಬಂದಿದ್ದ ಆಂಧ್ರಪ್ರದೇಶ ಮೂಲದ ಮಹಿಳೆಯೊಬ್ಬರು ಸಮುದ್ರಪಾಲಾಗಿದ್ದು, ಇನ್ನುಳಿದ ಮೂವರನ್ನು ಸ್ಥಳೀಯರು ರಕ್ಷಿಸಿದ್ದಾರೆ. ಆಂಧ್ರಪ್ರದೇಶದ ಕೊಂಡಾಪುರದ ಸಿರಿಲಿಂಗಪಲ್ಲಿ ನಿವಾಸಿ ಪಿ.ಎಲ್. ಪ್ರಸನ್ನ ಎಂಬುವರ ಪತ್ನಿ ಪರಿಮಿ ರತ್ನ ಕುಮಾರಿ (57) ಸಾವನ್ನಪ್ಪಿದವರು.
ಉಳ್ಳಾಲ ಬೀಚ್ನಲ್ಲಿ ವಿಹರಿಸುತ್ತಿದ್ದ ಸಂದರ್ಭ ಬೃಹತ್ ಗಾತ್ರದ ಅಲೆಯೊಂದು ಅಪ್ಪಳಿಸಿ ನಾಲ್ವರು ಮಹಿಳೆಯರನ್ನು ಎಳೆದೊಯ್ದಿತ್ತು. ತಕ್ಷಣ ನಾಲ್ವರನ್ನೂ ಸ್ಥಳೀಯರು ಸಮುದ್ರದಿಂದ ಹೊರಗೆಳೆದು ರಕ್ಷಿಸಿದ್ದಾರೆ. ಈ ಪೈಕಿ ಪರಿಮಿ ರತ್ನ ಕುಮಾರಿ ಪ್ರಜ್ಞೆ ತಪ್ಪಿದ್ದ ಹಿನ್ನೆಲೆಯಲ್ಲಿ ದೇರಳಕಟ್ಟೆ ಆಸ್ಪತ್ರೆಗೆ ಕೊಂಡೊಯ್ಯಲಾಗಿತ್ತು. ಆದರೆ, ಅದಾಗಲೇ ಅವರು ಸಾವನ್ನಪ್ಪಿದ್ದಾರೆ ಎಂದು ವೈದ್ಯರು ತಿಳಿಸಿದರು.
ಹೈದರಾಬಾದ್ನಿಂದ ಐವರು ಮಹಿಳೆಯರ ತಂಡ ಜೂನ್ 6ರಂದು ಮೈಸೂರಿಗೆ ವಿಮಾನದ ಮೂಲಕ ಬಂದಿಳಿದಿತ್ತು. ಅಲ್ಲಿ ಪ್ರವಾಸ ಮುಗಿಸಿದ ಬಳಿಕ ಜೂನ್ 7ರಂದು ಕೊಡಗಿಗೆ ತೆರಳಿದ್ದರು. ತದನಂತರ ಜೂನ್ 9ರಂದು ಸುಬ್ರಹ್ಮಣ್ಯ ಕ್ಷೇತ್ರದ ದರ್ಶನ ಮುಗಿಸಿ, ನಿನ್ನೆಯಷ್ಟೇ ಧರ್ಮಸ್ಥಳಕ್ಕೆ ಭೇಟಿ ನೀಡಿದ್ದರು. ಬಳಿಕ ಉಳ್ಳಾಲ ಸಮುದ್ರತೀರಕ್ಕೆ ವಿಹಾರಕ್ಕೆಂದು ಬಂದಿದ್ದರು.