ಮೈಸೂರು: ಮಂಡಕಳ್ಳಿ ವಿಮಾನ ನಿಲ್ದಾಣದ ಬಳಿ ಕಾರು ಡಿಕ್ಕಿ ಹೊಡೆದು ಹುಲಿ ಸಾವು, ಪ್ರಕರಣ ದಾಖಲು
🎬 Watch Now: Feature Video
Published : Jan 29, 2024, 10:31 AM IST
|Updated : Jan 29, 2024, 5:43 PM IST
ಮೈಸೂರು: ಕಾರು ಡಿಕ್ಕಿ ಹೊಡೆದ ಪರಿಣಾಮ ಹುಲಿ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಮೈಸೂರಿನ ಮಂಡಕಳ್ಳಿ ವಿಮಾನ ನಿಲ್ದಾಣದ ಬಳಿ ಭಾನುವಾರ ತಡರಾತ್ರಿ ನಡೆದಿದೆ. ಅಪಘಾತದಿಂದ ಎರಡು ವರ್ಷದ ಗಂಡು ಹುಲಿ ಸಾವನ್ನಪ್ಪಿದೆ. ಅರಣ್ಯ ಇಲಾಖೆ ಅಧಿಕಾರಿಗಳು ಹುಲಿಯ ಕಳೇಬರವನ್ನು ವಶಕ್ಕೆ ಪಡೆದಿದ್ದಾರೆ. ಡಿಕ್ಕಿ ಹೊಡೆದ ಪರಿಣಾಮ ಕಾರಿನ ಮುಂಭಾಗಕ್ಕೂ ಹಾನಿಯಾಗಿದೆ.
ಈ ಸಂಬಂಧ ಕಾರನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು, ಮೃತಪಟ್ಟ ಹುಲಿಯ ಮರಣೋತ್ತರ ಪರೀಕ್ಷೆ ನಡೆಸಲಾಯಿತು. ಜನವರಿ 28ರ ರಾತ್ರಿ ಸುಮಾರು 11 ಗಂಟೆ ಸಮಯದಲ್ಲಿ ಮಂಡಕನಹಳ್ಳಿ ವಿಮಾನ ನಿಲ್ದಾಣದ ಬಳಿ ವೇಗವಾಗಿ ಬರುತ್ತಿದ್ದ ಕಾರು, ರಸ್ತೆ ದಾಟುತ್ತಿದ್ದ ಎರಡು ವರ್ಷದ ಗಂಡು ಹುಲಿಗೆ ಡಿಕ್ಕಿ ಹೊಡೆದಿದೆ. ಪರಿಣಾಮ ಹುಲಿ ಸ್ಥಳದಲ್ಲೇ ಸಾವನ್ನಪ್ಪಿದೆ. ಈ ಸಂಬಂಧ ಅರಣ್ಯ ಇಲಾಖೆಯ ಅಧಿಕಾರಿಗಳು ಕಾರನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಮರಣೋತ್ತರ ಪರೀಕ್ಷೆ: ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರದ ವಿಧಾನದಂತೆ ಮೈಸೂರು ವೃತ್ತ ಅರಣ್ಯಾಧಿಕಾರಿಗಳ ನೇತೃತ್ವದಲ್ಲಿ, ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರದ ಪ್ರತಿನಿಧಿಗಳು, ಸ್ಥಳೀಯ ಸಂಸ್ಥೆಯ ಪ್ರತಿನಿಧಿಗಳು ಹಾಗೂ ಬಂಡೀಪುರ ಮತ್ತು ಮೈಸೂರಿನ ಪಶು ವೈದ್ಯಾಧಿಕಾರಿಗಳ ನೇತೃತ್ವದಲ್ಲಿ ಸಾವನ್ನಪ್ಪಿದ ಹುಲಿಯ ಮರಣೋತ್ತರ ಪರೀಕ್ಷೆಯನ್ನು ನಡೆಸಿ, ವಿಧಿವಿಧಾನದಂತೆ ಹುಲಿಯ ಕಳೇಬರವನ್ನು ವಿಲೇವಾರಿ ಮಾಡಲಾಯಿತು. ಅದಕ್ಕೂ ಮುನ್ನ ಹುಲಿ ಮೃತಪಟ್ಟ ಸ್ಥಳಕ್ಕೆ ಮೈಸೂರು ವಲಯ ಅರಣ್ಯಾಧಿಕಾರಿಗಳಾದ ಮಾಲತಿ ಪ್ರಿಯ, ಲಕ್ಷ್ಮಿನಾರಾಯಣ್, ಸುರೇಂದ್ರ ಹಾಗೂ ಇತರರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು.
ಅಪಘಾತದಲ್ಲಿ ಮೃತಪಟ್ಟ ಗಂಡು ಹುಲಿ ಈ ಹಿಂದೆ ನಂಜನಗೂಡು ಬಳಿ ಕೈಗಾರಿಕಾ ಪ್ರದೇಶದಲ್ಲಿ ಹಾಗೂ ಇತರ ಕಡೆ ಅರಣ್ಯ ಇಲಾಖೆ ಇಟ್ಟಿದ್ದ ಟ್ರ್ಯಾಪ್ ಕ್ಯಾಮರಾದಲ್ಲಿ ಸೆರೆಯಾಗಿತ್ತು. ಈ ಹುಲಿಯ ಓಡಾಟದ ಬಗ್ಗೆ ಸಾರ್ವಜನಿಕರಿಗೆ ಅರಿವನ್ನು ಸಹ ಮೂಡಿಸಲಾಗಿತ್ತು. ಯಾವುದೇ ರೀತಿ ಸಾರ್ವಜನಿಕರಿಗೆ ತೊಂದರೆ ಆಗದಂತೆ ಅರಣ್ಯ ಇಲಾಖೆಯಿಂದ ಸಿಬ್ಬಂದಿಯನ್ನು ನಿಯೋಜನೆ ಮಾಡಲಾಗಿತ್ತು ಎಂದು ಮೈಸೂರು ವೃತ್ತದ ಸಂರಕ್ಷಣಾಧಿಕಾರಿ ಮಾಲತಿ ಪ್ರಿಯಾ ಈಟಿವಿ ಭಾರತಕ್ಕೆ ಮಾಹಿತಿ ನೀಡಿದ್ದಾರೆ.
ಇದನ್ನೂ ನೋಡಿ: ಕಾಡು ಹಂದಿ ಮೇಲೆ ಮಿಂಚಿನ ವೇಗದಲ್ಲಿ ದಾಳಿ ಮಾಡಿದ ಹುಲಿ: ವಿಡಿಯೋ