ತಾಳವಾಡಿಯಲ್ಲಿ ಮಾರಮ್ಮನ ಜಾತ್ರೆ: ಮಸೀದಿ ಮುಂದೆ ಕೊಂಡ ಹಾಯ್ದು ಭಾವೈಕ್ಯತೆ - Maramma Fair
🎬 Watch Now: Feature Video
Published : Mar 28, 2024, 3:20 PM IST
|Updated : Mar 28, 2024, 3:34 PM IST
ಚಾಮರಾಜನಗರ: ಅಪ್ಪಟ ಕನ್ನಡಿಗರೇ ಇರುವ ತಮಿಳುನಾಡಿನ ತಾಳವಾಡಿಯಲ್ಲಿ ಹಿಂದೂ - ಮುಸ್ಲಿಂ ಭಾವೈಕ್ಯತೆ ಸಾರುವ ಮಾರಮ್ಮನ ಕೊಂಡೋತ್ಸವ ವಿಜೃಂಭಣೆಯಿಂದ ಜರುಗಿತು. ಚಾಮರಾಜನಗರ ಜಿಲ್ಲೆಯ ಗಡಿಭಾಗಕ್ಕೆ ಹೊಂದಿಕೊಂಡಿರುವ ತಮಿಳುನಾಡಿನ ತಾಳವಾಡಿಯಲ್ಲಿ ಮಾರಮ್ಮನ ಜಾತ್ರೆ ಪ್ರಯುಕ್ತ ಮಸೀದಿ ಮುಂಭಾಗದಲ್ಲೇ ಕೊಂಡೋತ್ಸವ ನಡೆಯಿತು. ಈ ಮೂಲಕ ಹಿಂದೂ - ಮುಸ್ಲಿಂ ಭಾವೈಕ್ಯತೆಗೆ ತಾಳವಾಡಿ ಸಾಕ್ಷಿಯಾಯಿತು.
ಸುಮಾರು 150 ವರ್ಷಗಳಿಂದ ಈ ಕೊಂಡೋತ್ಸವ ನಡೆಯುತ್ತಾ ಬಂದಿದ್ದು, ತಾಳವಾಡಿ ಫಿರ್ಕಾದ 58 ಗ್ರಾಮಗಳು ಸೇರಿದಂತೆ ಚಾಮರಾಜನಗರ, ತಮಿಳುನಾಡಿನ ಈರೋಡ್, ಕೊಯಮತ್ತೂರು ಸೇರಿದಂತೆ ವಿವಿಧೆಡೆಯಿಂದ ಸಾವಿರಾರು ಭಕ್ತರು ಧಾರ್ಮಿಕ ಉತ್ಸವದಲ್ಲಿ ಪಾಲ್ಗೊಂಡಿದ್ದರು.
ಗ್ರಾಮದ ಮುಖ್ಯ ಬೀದಿಯಲ್ಲಿರುವ ಮಾರಮ್ಮನ ದೇಗುಲದ ಪಕ್ಕ ಮಸೀದಿ ಇದೆ. ಇದರ ಗೋಡೆಗೆ ಅಂಟಿಕೊಂಡಂತೆ ಟಿಪ್ಪು ಸುಲ್ತಾನ್ ಕಾಲದಲ್ಲಿ ನಿರ್ಮಾಣವಾಗಿರುವ ವೇಣುಗೋಪಾಲ ಸ್ವಾಮಿ ಗುಡಿ ಇದೆ. ಮಸೀದಿ ಮುಂಭಾಗದಲ್ಲೇ ಕೊಂಡೋತ್ಸವ ಜರುಗುವುದು ಈ ಜಾತ್ರೆಯ ವಿಶೇಷ.
4 ದಶಕದ ಹಿಂದೆ ಜಾತ್ರೆ ಸಂಬಂಧ ಘರ್ಷಣೆಯಾಗಿತ್ತು. ನಂತರ ಊರಿನ ಎಲ್ಲಾ ಕೋಮಿನ ಮುಖಂಡರು ಕುಳಿತು ಚರ್ಚಿಸಿ ಯಾವುದೇ ಗಲಾಟೆಗೆ ಅವಕಾಶ ನೀಡದಂತೆ ಸಮಾಜದಲ್ಲಿ ಸಾಮರಸ್ಯ ಕಾಪಾಡುವುದರೊಂದಿಗೆ ಜಾತ್ರಾ ಮಹೋತ್ಸವ ಆಚರಣೆಗೆ ಮುಂದಾಗಿದ್ದರು. ಅಂದಿನಿಂದಲೂ ಸಾಮರಸ್ಯದಿಂದ ಮಸೀದಿ ಮುಂಭಾಗ ಕೊಂಡೋತ್ಸವ ನಡೆದುಕೊಂಡು ಬಂದಿದ್ದು ದೇವಾಲಯ ಅರ್ಚಕ ಶಿವಣ್ಣ ಗುರುವಾರದಂದು ಕೊಂಡ ಹಾಯ್ದರು.
ಇದನ್ನೂ ಓದಿ: ಬೆಂಗಳೂರು: ಬನಶಂಕರಿ ದೇವಸ್ಥಾನದಲ್ಲಿ ಭಕ್ತರು ಎಸೆದು ಹೋದ ವಸ್ತುಗಳಿಂದ ಗೊಬ್ಬರ ತಯಾರಿಕೆ