ಹಾವೇರಿ: ತೋರು ಬೆರಳಾಕೃತಿ ರಚಿಸಿ ರಾಷ್ಟ್ರೀಯ ಮತದಾರರ ದಿನಾಚರಣೆ - Haveri
🎬 Watch Now: Feature Video
Published : Jan 25, 2024, 11:00 PM IST
ಹಾವೇರಿ: ಜಿಲ್ಲಾಡಳಿತದ ವತಿಯಿಂದ ಗುರುವಾರ ರಾಷ್ಟ್ರೀಯ ಮತದಾರ ದಿನವನ್ನು ವಿಭಿನ್ನವಾಗಿ ಆಚರಿಸಿತು. ನಗರದ ಹೊಸಮನಿ ಸಿದ್ದಪ್ಪ ಜಿಲ್ಲಾ ಕ್ರೀಡಾಂಗಣದಲ್ಲಿ ಸುಮಾರು ಎರಡು ಸಾವಿರ ವಿದ್ಯಾರ್ಥಿಗಳಿಂದ ತೋರು ಬೆರಳಾಕೃತಿ ರಚಿಸಿ ಗಮನ ಸೆಳೆಯಿತು. ಪ್ರಸ್ತುತ ವರ್ಷ ಲೋಕಸಭೆ ಚುನಾವಣೆ ಬರುತ್ತದೆ. ಈ ಚುನಾವಣೆಯಲ್ಲಿ ಪ್ರತಿಶತ ನೂರಕ್ಕೆ ನೂರರಷ್ಟು ಮತದಾನದ ಗುರಿ ಇಟ್ಟುಕೊಳ್ಳಲಾಗಿದೆ. ಜಿಲ್ಲೆಯ ಮತದಾನದ ಪ್ರತಿಶತ ಪ್ರಮಾಣ ಕೂಡ ಅಧಿಕಗೊಳಿಸುವ ಅವಶ್ಯಕತೆ ಇದೆ. ಈ ಉದ್ದೇಶದಿಂದ ತೋರು ಬೆರಳಾಕೃತಿಯನ್ನ ರಚಿಸಿರುವುದಾಗಿ ಜಿಲ್ಲಾ ಪಂಚಾಯತ್ ಸಿಇಒ ಅಕ್ಷಯ ಶ್ರೀಧರ್ ತಿಳಿಸಿದರು.
ಚುನಾವಣಾ ಆಯೋಗವು ಈ ವರ್ಷ "ಮತದಾನಕ್ಕಿಂತ ಇನ್ನೊಂದಿಲ್ಲ, ನಾನು ಖಚಿತವಾಗಿ ಮತದಾನ ಮಾಡುವೆ" ಎನ್ನುವ ಶಿರ್ಷಿಕೆ ನೀಡಿದ್ದು ವರ್ಷಪೂರ್ತಿ ಮತದಾನ ಜಾಗೃತಿ ಕಾರ್ಯಕ್ರಮ ನಡೆಯಲಿದೆ. ರಾಜ್ಯದ ಸರಾಸರಿ ಮತದಾನಕ್ಕಿಂತ ಜಿಲ್ಲೆಯಲ್ಲಿ ಸರಾಸರಿ ಮತದಾನ ಅಧಿಕವಾಗಿದೆ. ಆದರೆ, ತಮಗೆ ರಾಜ್ಯದ ಸರಾಸರಿಗಿಂತ ಅಧಿಕ ಪ್ರಮಾಣದಲ್ಲಿ ಜಿಲ್ಲೆಯಲ್ಲಿ ಮತದಾನ ಅಧಿಕವಾಗಬೇಕು. ಈ ಹಿನ್ನೆಲೆ ಜಿಲ್ಲೆಯಲ್ಲಿ ಮತದಾನ ಜಾಗೃತಿ ಮೂಡಿಸಲಾಗುತ್ತದೆ. 2019ರ ಲೋಕಸಭೆ ಚುನಾವಣಿಯಲ್ಲಿ ಜಿಲ್ಲೆಯಲ್ಲಿ ಪ್ರತಿಶತ 74 ರಷ್ಟು ಮತದಾನವಾಗಿತ್ತು. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಪ್ರತಿಶತ 81 ರಷ್ಟು ಮತದಾನವಾಗಿದೆ. ಈ ಹಿನ್ನೆಲೆ ಈ ವರ್ಷ ನಡೆಯುವ ಲೋಕಸಭೆ ಚುನಾವಣೆಯಲ್ಲಿ ಪ್ರತಿಶತ ನೂರಕ್ಕೆ ನೂರರಷ್ಟು ಮತದಾನದ ಗುರಿ ಇಟ್ಟುಕೊಂಡರೆ ಕೊನೆಯ ಪಕ್ಷ ಪ್ರತಿಶತ 90 ರಷ್ಟು ಮತದಾನವಾಗುವ ಸಾಧ್ಯತೆ ಇದೆ ಎಂದು ಸಹ ಅಕ್ಷಯ ತಿಳಿಸಿದರು.