ದಸರಾ ದೀಪಾಲಂಕಾರದಲ್ಲಿ ಸಾಂಸ್ಕೃತಿಕ ನಗರಿಯ ವೈಭವ: ವಿಡಿಯೋ - DASARA LIGHTINGS

🎬 Watch Now: Feature Video

thumbnail

By ETV Bharat Karnataka Team

Published : Oct 10, 2024, 6:00 PM IST

ಮೈಸೂರು: ನಾಡಹಬ್ಬ ದಸರಾದ ಪ್ರಮುಖ ಆಕರ್ಷಣೆಗಳಲ್ಲಿ ಒಂದಾಗಿರುವ ವಿದ್ಯುತ್‌ ದೀಪಾಲಂಕಾರ ಈ ಬಾರಿ ವಿಶಿಷ್ಟವಾಗಿದ್ದು, ಸೂಜಿಗಲ್ಲಿನಂತೆ ನೋಡುಗರನ್ನು ಸೆಳೆಯುತ್ತಿದೆ. ಪ್ರತಿ ವರ್ಷದಂತೆ ಚಾಮುಂಡೇಶ್ವರಿ ವಿದ್ಯುತ್‌ ಸರಬರಾಜು ನಿಗಮ(ಸೆಸ್ಕ್‌)ದಿಂದ ದಸರಾ ವಿದ್ಯುತ್‌ ದೀಪಾಲಂಕಾರ ಮಾಡಲಾಗಿದ್ದು ನಗರದ ಪ್ರಮುಖ ರಸ್ತೆ, ವೃತ್ತಗಳೆಲ್ಲ ಆಕರ್ಷಕ ದೀಪಾಲಂಕಾರದಿಂದ ಕಂಗೊಳಿಸುತ್ತಿವೆ. ಜನರು ವಾಹನಗಳಲ್ಲಿ ಸಂಚರಿಸುತ್ತಾ ವೀಕ್ಷಿಸಿ, ಸೆಲ್ಫಿ, ಫೋಟೋ ಕ್ಲಿಕ್ಕಿಸಿಕೊಂಡು ಸಂಭ್ರಮಿಸುತ್ತಿದ್ದಾರೆ. ಈ ವಿಜೃಂಭಣೆಯ ವೈಭವವನ್ನು ಕಣ್ತುಂಬಿಕೊಳ್ಳಲು ಜನಸಾಗರವೇ ಇಲ್ಲಿಗೆ ಹರಿದು ಬರುತ್ತಿದೆ. ಪರಿಣಾಮ ನಗರದ ಪ್ರಮುಖ ರಸ್ತೆಗಳಲ್ಲಿ ಟ್ರಾಫಿಕ್‌ ಜಾಮ್‌ ಸಹ ಉಂಟಾಗುತ್ತಿದೆ. 

ನಾಡಹಬ್ಬ ದಸರಾದ ಪ್ರಮುಖ ಆಕರ್ಷಣೆ ಜಂಬೂ ಸವಾರಿಯಾದರೂ, ಜಂಬೂ ಸವಾರಿಗೆ ಮೆರುಗು ನೀಡುವ ಪ್ರವಾಸಿಗರನ್ನು ಹಾಗೂ ಇತರ ನಾಡಿನ ಜನರನ್ನು ಸೂಜಿಗಲ್ಲಿನಂತೆ ಸೆಳೆಯುವುದು ದಸರಾ ದೀಪಾಲಂಕಾರ ಮಾತ್ರ. ಶಾಶ್ವತವಾಗಿ ಮೈಸೂರು ಅರಮನೆಗೆ ದೀಪಾಲಂಕಾರ ನೋಡಲು ದೇಶ-ವಿದೇಶಗಳಿಂದ ಜನರು ಬರುವುದು ಸಾಮಾನ್ಯ. ಆದರೆ, ದಸರಾ ಸಂದರ್ಭದಲ್ಲಿ ಅರಮನೆ ನಗರಿ, ಪ್ರಮುಖ ವೃತ್ತ, ರಸ್ತೆ, ಪಾರಂಪರಿಕ ಕಟ್ಟಡ, ಮರ ಹಾಗೂ ಪ್ರಮುಖ ವೃತ್ತಗಳಲ್ಲಿ ಪ್ರಖ್ಯಾತ ವ್ಯಕ್ತಿಗಳ ಭಾವಚಿತ್ರಕ್ಕೆ ಲೈಟಿಂಗ್‌ ವ್ಯವಸ್ಥೆ ದಸರಾ ಸಂದರ್ಭದಲ್ಲಿ ಮಾತ್ರ ನಡೆಯುತ್ತದೆ. ಸದ್ಯ ವಿದ್ಯುತ್‌ ದೀಪಗಳಿಂದಲೇ ಹಲವು ಕಲಾಕೃತಿಗಳನ್ನು ನಿರ್ಮಿಸಲಾಗಿದ್ದು, ನೋಡುಗರ ಗಮನ ಸೆಳೆಯುತ್ತಿವೆ.

ಈ ಬಾರಿ 21 ದಿನಗಳ ಕಾಲ ನಗರದ 130 ಕಿ.ಮೀ. ವ್ಯಾಪ್ತಿಯಲ್ಲಿ ದಸರಾ ದೀಪಾಲಂಕಾರವನ್ನು ಸೆಸ್ಕೆ ಮಾಡಿದ್ದು ವಿಶೇಷ. ನಗರದ ಪ್ರಮುಖ ವೃತ್ತಗಳಾದ ಕೆ.ಆರ್.‌ವೃತ್ತ, ದೇವರಾಜ್‌ ಅರಸು ರಸ್ತೆ, ಕಾಫೀ ಡೇ ವೃತ್ತ, ಹಳೆಯ ಜಿಲ್ಲಾಧಿಕಾರಿ ಹಾಗೂ ಹೊಸ ರಸ್ತೆಗಳ ಮೇಲೆ ಲಕ್ಷಾಂತರ ಎಲ್​ಇಡಿ ಬಲ್ಬ್​ಗಳನ್ನು ಬಳಸಿ ವಿಶಿಷ್ಟ ರೀತಿಯಲ್ಲಿ ದೀಪಾಲಂಕಾರ ಮಾಡಲಾಗಿದೆ. ನಗರದ ಪ್ರಮುಖ ವೃತ್ತಗಳಲ್ಲಿ ದೀಪಾಲಂಕಾರದ ಜತೆಗೆ 65 ಪ್ರತಿಕೃತಿಗಳನ್ನು ನಿರ್ಮಾಣ ಮಾಡಲಾಗಿದೆ. 

ಇದರಲ್ಲಿ ಸೋಮನಾಥಪುರ ದೇವಾಲಯ, ಭಾರತದ ಸಂವಿಧಾನ ಪ್ರಸ್ತಾವನೆ, ಸೋಮನಾಥೇಶ್ವರ ದೇವಾಲಯ, ಮೈಸೂರಿ ಒಡೆಯರ ಪ್ರತಿಕೃತಿಗಳು, ವಿಶ್ವೇಶ್ವರಯ್ಯ, ಭುವನೇಶ್ವರಿ ಸೇರಿದಂತೆ ವಿಶಿಷ್ಟ ಪ್ರತಿಕೃತಿಗಳನ್ನ ಹಾಕಲಾಗಿದೆ. ಇದರ ಜತೆಗೆ ಅರಮನೆ ಮುಂಭಾಗದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು, ಚಿಕ್ಕ ಗಡಿಯಾರದ ಬಳಿ ಸಾಂಸ್ಕೃತಿಕ ಕಾರ್ಯಕ್ರಮಗಳು ಸೇರಿದಂತೆ ಪ್ರಮುಖ ವೃತ್ತಗಳಲ್ಲಿ ದೀಪಾಲಂಕಾರದ ಜತೆ ಕಾರ್ಯಕ್ರಮಗಳ ಆಯೋಜನೆ, ದೀಪಾಲಂಕಾರ ಅಂದವನ್ನು ಹೆಚ್ಚಿಸಿದೆ. ದಸರಾ ದೀಪಾಲಂಕಾರದಲ್ಲಿ ಸಾಂಸ್ಕೃತಿಕ ನಗರಿಯ ಸಂಸ್ಕೃತಿಯ ಅನಾವರಣದ ಜತೆಗೆ ಅರಮನೆ ನಗರಿಗಳ ರಾಜವೈಭವ ಬಿಂಬಿತವಾಗುತ್ತಿದೆ. 

ಇದನ್ನೂ ಓದಿ: ದಸರಾ ಮಹೋತ್ಸವ: ದೀಪಾಲಂಕಾರದಿಂದ ಚಾಮರಾಜನಗರ ಜಗಮಗ- ವಿಡಿಯೋ - Dasara lightings

ABOUT THE AUTHOR

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.