ಹಾವೇರಿ ಆಂಜನೇಯ ದೇವಸ್ಥಾನದ ಗರ್ಭಗುಡಿಯೊಳಗೆ ಮುಸಿಯಾ ಬಳಗ: ವಿಡಿಯೋ ವೈರಲ್ - LANGURS IN ANJANEYA TEMPLE
🎬 Watch Now: Feature Video
Published : Dec 5, 2024, 1:12 PM IST
ಹಾವೇರಿ: ಬ್ಯಾಡಗಿ ತಾಲೂಕಿನ ಕದರಮಂಡಲಗಿ ಗ್ರಾಮದ ಸುಪ್ರಿದ್ಧ ಆಂಜನೇಯ ದೇವಸ್ಥಾನದ ವಿಡಿಯೋ ಇದೀಗ ವೈರಲ್ ಆಗಿದೆ. ಸ್ಥಳೀಯವಾಗಿ ಕಾಂತೇಶ ದೇವಸ್ಥಾನ ಎಂದು ಕರೆಯುವ ಈ ದೇವಸ್ಥಾನದ ಗರ್ಭಗುಡಿಯಲ್ಲಿನ ಮಾರುತಿ ಮೂರ್ತಿಯ ಪಾದದಡಿ 10ಕ್ಕೂ ಅಧಿಕ ಮುಸಿಯಾಗಳು ಕುಳಿತಿವೆ. ಅಲ್ಲದೇ ಮಾರುತಿ ಮೂರ್ತಿಯ ಮೇಲೇರಿ ಓಡಾಡಿವೆ. ಸದಾ ಭಕ್ತರಿಂದ ತುಂಬಿ ತುಳುಕುವ ದೇವಸ್ಥಾನದಲ್ಲಿ ಯಾರ ಭಯವೂ ಇಲ್ಲದೇ ಹನುಮನ ವಿಗ್ರಹದ ಪಾದ ಸ್ಪರ್ಶ ಮಾಡಿದ ಮುಸಿಯಾಗಳ ನಡೆ ಭಕ್ತರಲ್ಲಿ ಆಶ್ಚರ್ಯ ಮೂಡಿಸಿವೆ.
ಗರ್ಭಗುಡಿಯೊಳಗೆ ಒಂದು ಗಂಟೆಗೂ ಹೆಚ್ಚು ಕಾಲ ಇದ್ದ ವಾನರ ಸೈನ್ಯದ ಭಕ್ತಿಗೆ ಭಕ್ತರೇ ಶಾಕ್ ಆಗಿದ್ದಾರೆ. ದೇವಸ್ಥಾನಕ್ಕೆ ಬಂದ ಭಕ್ತರು ಈ ದೃಶ್ಯವನ್ನು ಮೊಬೈಲ್ನಲ್ಲಿ ಸೆರೆ ಹಿಡಿದಿದ್ದು, ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಕದರಮಂಡಲಗಿಯ ಕಾಂತೇಶ ದೇವಸ್ಥಾನವನ್ನ ಜನಮೇಜಯ ರಾಜ ನಿರ್ಮಿಸಿದ ಎಂಬ ಪೌರಾಣಿಕ ಹಿನ್ನೆಲೆ ಇದೆ. ಇಲ್ಲಿರುವ ಆಂಜನೇಯನ ಕಣ್ಣುಗಳಲ್ಲಿ ಸಾಲಿಗ್ರಾಮ ಇರುವ ಕಾರಣ ಕಾಂತೇಶ ಎಂದು ಕರೆಯಲಾಗುತ್ತದೆ. ಈ ದೇವಸ್ಥಾನದಲ್ಲಿ ಇದೇ 7 ರಂದು ಕಾರ್ತಿಕೋತ್ಸವ ಮತ್ತು 8 ರಂದು ತೆಪ್ಪೋತ್ಸವ ಇದೆ. ಕದರಮಂಡಲಗಿ ಕಾಂತೇಶ, ಹಿರೇಕೆರೂರು ತಾಲೂಕಿನ ಸಾತೇನಹಳ್ಳಿಯ ಶಾಂತೇಶ ಮತ್ತು ಶಿಕಾರಿಪುರದ ಭ್ರಾಂತೇಶ ದೇವಸ್ಥಾನಗಳು ಆಂಜನೇಯ ದೇವಸ್ಥಾನಗಳಾಗಿವೆ. ಈ ದೇವಸ್ಥಾನಗಳನ್ನು ಅಧಿಕಮಾಸದಲ್ಲಿ ಒಂದೇ ದಿನ ದರ್ಶನ ಮಾಡಿದರೆ ಕಾಶಿಯಾತ್ರೆ ಮಾಡಿದ ಪುಣ್ಯ ಲಭಿಸುತ್ತದೆ ಎಂಬ ಪ್ರತೀತಿಯೂ ಇದೆ.